‘ಹಲ್ಲು ಉಜ್ಜುವ ಅಭಿಯಾನದಲ್ಲಿ 17 ಸಾವಿರ ಮಕ್ಕಳು ಭಾಗಿ’

ಬೆಂಗಳೂರು, ಜ.7: ಮಕ್ಕಳ ಹಲ್ಲುಗಳ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ ಮೈ ಡೆಂಟಲ್ ಪ್ಲಾನ್ ಸಂಸ್ಥೆಯು ಡೆಲ್ಲಿ ಪಬ್ಲಿಕ್ ಶಾಲೆಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ‘ಬ್ರಶ್ ರೈಟ್ ಸ್ಮೈಲ್ ಬ್ರೈಟ್’ ಅಭಿಯಾನದಲ್ಲಿ 17,505 ಮಕ್ಕಳು ಪಾಲ್ಗೊಂಡು ನೂತನ ದಾಖಲೆಯನ್ನು ನಿರ್ಮಿಸಿದ್ದಾರೆ.
ಗುರುವಾರ ಸರ್ಜಾಪುರ ರಸ್ತೆಯಲ್ಲಿರುವ ಡೆಲ್ಲಿ ಪಬ್ಲಿಕ್ ಶಾಲೆ ಆವರಣದಲ್ಲಿ ಆಯೋಜಿಸಿದ್ದ ‘ಬ್ರಶ್ ರೈಟ್ ಸ್ಮೈಲ್ ಬ್ರೈಟ್’ ಅಭಿಯಾನಕ್ಕೆ ರಾಜ್ಯಸಭಾ ಸದಸ್ಯ ಡಾ.ಕೆ.ರಹಮಾನ್‌ಖಾನ್ ಹಾಗೂ ಭಾರತೀಯ ದಂತ ಪರಿಷತ್‌ನ ಉಪಾಧ್ಯಕ್ಷ ಪ್ರೊ.ಜಯಕರ್ ಶೆಟ್ಟಿ ಚಾಲನೆ ನೀಡಿದರು.
ಮಕ್ಕಳ ಹಲ್ಲುಗಳಲ್ಲಿ ಕಂಡು ಬರುವ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳು ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜು ವುದನ್ನು ರೂಢಿ ಮಾಡಿಕೊಂಡರೆ ಅವರ ಇಡೀ ಜೀವನದಲ್ಲಿ ಹಲ್ಲಿನ ಸಮಸ್ಯೆಗೆ ಗುರಿಯಾಗುವುದಿಲ್ಲ ಎಂದು ಮೈ ಡೆಂಡಲ್ ಪ್ಲಾನ್ ಸಿಓಓ ಡಾ.ಗಿರೀಶ್‌ರಾವ್ ತಿಳಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ಹಲ್ಲಿಗೆ ಸಂಬಂಧಿಸಿದ ಅನೇಕ ಕಾಯಿಲೆಗಳಿಗೆ ಮಕ್ಕಳು ಗುರಿಯಾಗುವ ಸಾಧ್ಯತೆಗಳಿವೆ. ಬಾಯಿಯ ಆರೋಗ್ಯದ ಕುರಿತು ಅವರಿಗೆ ಸೂಕ್ತವಾದ ಮಾರ್ಗದರ್ಶನ ನೀಡಬೇಕಿದೆ. ಪ್ರಪಂಚದಲ್ಲಿ 2-11 ವರ್ಷದೊಳಗಿನ ಶೇ.55ರಷ್ಟು ಮಕ್ಕಳಿಗೆ ಹಲ್ಲಿನ ತೊಂದರೆ ಇರುತ್ತದೆ. ಶೇ.40ರಷ್ಟು ಮಕ್ಕಳಿಗೆ ಶಾಶ್ವತವಾಗಿ ಹಲ್ಲಿನ ತೊಂದರೆ ಇರುತ್ತದೆ. ಭಾರತದಲ್ಲಿ ಕೇವಲ ಶೇ.5ರಷ್ಟು ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಹಲ್ಲಿನ ಚಿಕಿತ್ಸೆ ಮತ್ತು ಹಲ್ಲಿನ ಆರೋಗ್ಯದ ಕುರಿತು ಮಾಹಿತಿ ಸಿಗುತ್ತಿದೆ ಎಂದು ಅವರು ಹೇಳಿದರು.
ಬ್ರಶ್ ರೈಟ್ ಸ್ಮೈಲ್ ಬ್ರೈಟ್ ಅಭಿಯಾನದ ಉದ್ದೇಶ 2020ರ ವೇಳೆಗೆ ಎಲ್ಲ ಮಕ್ಕಳು ಹಲ್ಲಿನ ಸಮಸ್ಯೆಯಿಂದ ಹೊರ ಬರಬೇಕು. ಇಂದು 6 ರಿಂದ 15 ವರ್ಷದೊಳಗಿನ ಮಕ್ಕಳಿಗೆ ದಂತ ತಪಾಸಣೆ ಮಾಡಿ, ಅವರಿಗೆ ಹಲ್ಲು ಉಜ್ಜುವ ಸರಿಯಾದ ಕ್ರಮವನ್ನು ಹೇಳಿಕೊಡಲಾಗಿದೆ ಎಂದು ಅವರು ತಿಳಿಸಿದರು.
1995ರಲ್ಲಿ ದಕ್ಷಿಣ ಅಮೆರಿಕ ಸೆಲ್ವಲಾಡ್‌ನಲ್ಲಿ 13,800 ಮಕ್ಕಳು ಈ ರೀತಿಯ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಇಂದು 17,505 ಮಕ್ಕಳು ಪಾಲ್ಗೊಂಡಿರುವ ಈ ಅಭಿಯಾನ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ. ಇಂದಿನ ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು, ಮಾಹಿತಿಗಳನ್ನು ಗಿನ್ನಿಸ್ ದಾಖಲೆಯ ಸಮಿತಿಗೆ ಕಳುಹಿಸಿಕೊಡಲಾಗುವುದು ಎಂದು ಗಿರೀಶ್‌ರಾವ್ ತಿಳಿಸಿದರು.
ಎಂಟು ಸರಕಾರಿ ಶಾಲೆಗಳು ಸೇರಿದಂತೆ ಒಟ್ಟು 20 ಶಾಲೆಯ ಮಕ್ಕಳು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಈ ಪೈಕಿ 150 ಮಂದಿ ಮಕ್ಕಳು ವಿಕಲಚೇತರು, ಬುದ್ದಿಮಾಂದ್ಯ, ಮೂಗ ಹಾಗೂ ಕಿವುಡ ಮಕ್ಕಳು ಪಾಲ್ಗೊಂಡಿರುವುದು ವಿಶೇಷ. ಕಳೆದ ನಾಲ್ಕು ತಿಂಗಳುಗಳಿಂದ ಈ ಅಭಿಯಾನದ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸುಮಾರು 100ಕ್ಕೂ ಹೆಚ್ಚು ಮಂದಿ ಪ್ರಾಂಶುಪಾಲರು, ಶಿಕ್ಷಕರು ಇದಕ್ಕೆ ಸಹಕಾರ ನೀಡಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಡೆಲ್ಲಿ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಮಸೂದ್ ಅಲಿಖಾನ್, ನಿರ್ದೇಶಕ ಮನ್ಸೂರ್‌ಖಾನ್, ಮೈ ಡೆಂಟಲ್ ಪ್ಲಾನ್ ಸಿಇಓ ಡಾ.ಮೊಹಿಂದರ್ ನರುಲಾ, ಡಾ.ಆನಂದ್ ಕೃಷ್ಟ, ಧೀಮಂತ್ ಶಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





