ತಲೆ ಮರೆಸಿಕೊಂಡಿದ್ದ ಅಪರಾಧಿಯ ಬಂಧನ
ಬೆಂಗಳೂರು, ಜ. 7: ಪೆರೋಲ್ ಮೇಲೆ ಕಾರಾಗೃಹದಿಂದ ಹೊರಬಂದು ತಲೆ ಮರೆಸಿಕೊಂಡಿದ್ದ ಅಪರಾಧಿಯನ್ನು ಇಲ್ಲಿನ ಸದಾಶಿವನಗರ ಠಾಣಾ ಪೊಲೀಸರು ಜಾರ್ಖಂಡ್ ರಾಜ್ಯದಲ್ಲಿ ಪತ್ತೆ ಮಾಡಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಅಪರಾಧಿಯನ್ನು ಮೆಹಬೂಬ್ (35) ಎಂದು ಗುರುತಿಸಲಾಗಿದೆ. 2005ರ ಮೇ 8ರಂದು ಎಲಿಝಬತ್ ಎಂಬವರ ಮೇಲೆ ಆ್ಯಸಿಡ್ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದ ಮೆಹಬೂಬ್‌ನನ್ನು ಇಲ್ಲಿನ ಸದಾಶಿವನಗರ ಠಾಣಾ ಪೊಲೀಸರು ಬಂಧಿಸಿದ್ದರು.ತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದು, 2006ರ ನ.28ರಂದು ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 1ಲಕ್ಷ ರೂ.ದಂಡ ವಿಧಿಸಿತ್ತು. ಈ ಮಧ್ಯೆ ಅಪರಾಧಿ 60 ದಿನ ಪೆರೋಲ್ ರಜೆಯ ಮೇಲೆ ತೆರಳಿದ್ದ. 2010ರ ನ.15ರಂದು ಕಾರಾಗೃಹಕ್ಕೆ ವಾಪಸ್ ಆಗಬೇಕಿತ್ತು. ಆದರೆ, ಕಳೆದ ಐದು ವರ್ಷಗಳಿಂದ ಜಾರ್ಖಂಡ್ ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದ. ಈ ಸಂಬಂಧ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
ತಲೆಮರೆಸಿಕೊಂಡಿದ್ದ ಅಪರಾಧಿ ಮೆಹಬೂಬ್ ಪತ್ತೆಗೆ ಸದಾಶಿವನಗರ ಪೊಲೀಸ್ ಇನ್‌ಸ್ಪೆಕ್ಟರ್ ಎಚ್.ಕೆ.ತಿಮ್ಮಯ್ಯ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಆರೋಪಿ ಜಾರ್ಖಂಡ್‌ನಲ್ಲಿ ವಾಸ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಲ್ಲಿಗೆ ತೆರಳಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





