ಆಸ್ಪತ್ರೆ ವಿರುದ್ಧ ಪೋಷಕರ ಪ್ರತಿಭಟನೆ
ಬೆಂಗಳೂರು, ಜ. 7: ಆಸ್ಪತ್ರೆಗೆ ದಾಖಲಾಗಿದ್ದ ಒಂದೂವರೆ ವರ್ಷದ ಗಂಡು ಮಗು ವೈದ್ಯರ ನಿರ್ಲಕ್ಷದ ಹಿನ್ನೆಲೆಯಲ್ಲಿ ಸಾವನ್ನಪ್ಪಿದೆ ಎಂದು ಆರೋಪಿಸಿ ಮಗುವಿನ ಪೋಷಕರು ಖಾಸಗಿ ಆಸ್ಪತ್ರೆಯ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಲ್ಲಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಬಾಗಲಗುಂಟೆಯ ಹಾವನೂರು ಲೇಔಟ್‌ನ ನಿವಾಸಿ ಶಂಕರ ಎಂಬವರು ತಮ್ಮ ಒಂದೂವರೆ ವರ್ಷದ ಮಣಿಕಂಠ ಎಂಬ ಮಗುವಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜ.5ರಂದು ಹೇಸರಘಟ್ಟ ಮುಖ್ಯರಸ್ತೆಯಲ್ಲಿನ ಸಪ್ತಗಿರಿ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಗುರುವಾರ ಬೆಳಗ್ಗೆ ಮಗು ಸಾವನ್ನಪ್ಪಿದ್ದು, ಆಸ್ಪತ್ರೆಯ ವೈದ್ಯರ ನಿರ್ಲಕ್ಷದ ಹಿನ್ನೆಲೆಯಲ್ಲಿ ಮಗು ಮೃತಪಟ್ಟಿದೆ ಎಂದು ಮೃತ ಮಗುವಿನ ಪೋಷಕರು ಆರೋಪಿಸಿದ್ದಾರೆ. ಮದುವೆಯಾಗಿ ಏಳು ವರ್ಷಗಳ ಬಳಿಕ ನಮಗೆ ಮಗುವಾಗಿತ್ತು. ಆದರೆ, ಜ್ವರ ಬಂದ ಹಿನ್ನೆಲೆಯಲ್ಲಿ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ಆಸ್ಪತ್ರೆ ಸಿಬ್ಬಂದಿ ಮಗುವಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಿಲ್ಲ. ಹೀಗಾಗಿ ಮಗು ಸಾವನ್ನಪ್ಪಿದೆ ಎಂದು ಮೃತ ಮಗುವಿನ ತಂದೆ ಶಂಕರ್ ಕಣ್ಣೀರಿಟ್ಟಿದ್ದಾರೆ.
ಸಪ್ತಗಿರಿ ಆಸ್ಪತ್ರೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಅವರು ಆಗ್ರಹಿಸಿದ್ದಾರೆ. ಆದರೆ, ಈ ಪ್ರಕರಣ ಸಂಬಂಧ ಯಾವುದೇ ದೂರನ್ನು ಪೋಷಕರು ನೀಡಿಲ್ಲ ಎಂದು ಸೋಲದೇವನಹಳ್ಳಿ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ.





