ಮಹದಾಯಿ ಯೋಜನೆ ವಿವಾದ: ಶೆಟ್ಟರ್ ಮನವಿ
ಬೆಂಗಳೂರು, ಜ.7: ಮಹದಾಯಿ ನದಿ ತಿರುವು ಯೋಜನೆಯ ಸಮಸ್ಯೆ ಪರಿಹಾರಕ್ಕೆ ಗೋವಾ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳು, ವಿಪಕ್ಷ ನಾಯಕರೊಂದಿಗೆ ರಾಜ್ಯದ ಸರ್ವಪಕ್ಷಗಳ ಮುಖಂಡರ ನಿಯೋಗ ಭೇಟಿ ಮಾಡಲು ಅನುಕೂಲವಾಗುವಂತೆ ಅವರಿಗೆ ಪತ್ರ ಬರೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮನವಿ ಮಾಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಜಗದೀಶ್ ಶೆಟ್ಟರ್, ಮಹದಾಯಿ ನದಿಯಿಂದ 7 ಟಿಎಂಸಿ ಕುಡಿಯುವ ನೀರಿನ ಬೇಡಿಕೆಗಾಗಿ ರಾಜ್ಯ ಸರಕಾರವು ಮಹದಾಯಿ ನ್ಯಾಯಾಧೀಕರಣದ ಎದುರು ಸಲ್ಲಿಸಿರುವ ಮಧ್ಯಂತರ ಅರ್ಜಿ ಫೆ.23ರಂದು ವಿಚಾರಣೆಗೆ ಬರಲಿದೆ. ಇದಕ್ಕೂ ಮುಂಚೆ ನ್ಯಾಯಾಲಯದ ವ್ಯಾಪ್ತಿಯ ಹೊರಗಡೆ ಕಳಸಾ ಬಂಡೂರಿ ಯೋಜನೆ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಯತ್ನಿಸಬೇಕು ಎಂದು ಕೋರಿದ್ದಾರೆ.
ರಾಜ್ಯದ ಜಲಸಂಪನ್ಮೂಲ ಸಚಿವರ ನೇತೃತ್ವದಲ್ಲಿ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ನಿಯೋಗದ ಭೇಟಿಗೆ ಅವಕಾಶ ಕೋರಿ ಗೋವಾ ಮುಖ್ಯಮಂತ್ರಿಗೆ ತಾವು ಪತ್ರ ಬರೆದಿದ್ದೀರಾ. ಈ ಯೋಜನೆಗೆ ಸಂಬಂಧಿಸಿದಂತೆ ಗದಗ, ಧಾರವಾಡ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಹೋರಾಟ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಸಮಸ್ಯೆ ಬಗೆಹರಿಯಬೇಕಾದರೆ ಗೋವಾ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಮತ್ತು ಅಲ್ಲಿಯ ವಿರೋಧ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸುವುದು ಅವಶ್ಯಕವಾಗಿದೆ. ಆದುದರಿಂದ, ರಾಜ್ಯದ ಸರ್ವಪಕ್ಷಗಳ ನಿಯೋಗವು ಅವರನ್ನು ಭೇಟಿ ಮಾಡಲು ಅವಕಾಶ ಕೋರಿ ಪತ್ರ ಬರೆಯುವಂತೆ ಜಗದೀಶ್ ಶೆಟ್ಟರ್ ಮನವಿ ಮಾಡಿದ್ದಾರೆ.







