ಜ.24ರವರೆಗೆ ಅವರೆಬೇಳೆ ಮೇಳ

ಬೆಂಗಳೂರು, ಜ.7: ಚಳಿಗಾಲದ ರುಚಿಕರ ತಿನಿಸಾದ ಅವರೆಬೇಳೆಯ ಪದಾರ್ಥಗಳನ್ನು ಇಷ್ಟಪಡುವವರಿಗೆ ನಗರದ ಸಜ್ಜನ್‌ರಾವ್ ಸರ್ಕಲ್‌ನಲ್ಲಿರುವ ವಾಸವಿ ಕಾಂಡಿಮೆಂಟ್ಸ್ ಜ.7ರಿಂದ 24ರವರೆಗೆ ಅವರೆಮೇಳವನ್ನು ಆಯೋಜಿಸಿದೆ.
ಅವರೆಬೇಳೆಯು ಹಳೆಮೈಸೂರು ಭಾಗದ ಜನತೆಯ ರುಚಿಕಾರವಾದ ತಿನಿಸುಗಳಲ್ಲೊಂದು. ಅವರೆಬೇಳೆಯಲ್ಲಿ ಹತ್ತಾರು ಬಗೆಯ ತಿನಿಸುಗಳನ್ನು ಮಾಡಬಹುದಾಗಿದೆ. ಈ ಬಗ್ಗೆ ಜನತೆಗೆ ತಿಳಿಸುವ ಉದ್ದೇಶದಿಂದ ಅವರೆ ಮೇಳವನ್ನು ಆಯೋಜಿಸಲಾಗಿದೆ ಎಂದು ವಾಸವಿ ಕಾಂಡಿಮೆಂಟ್ಸ್‌ನ ಮಾಲಕಿ ಗೀತಾ ಶಿವಕುಮಾರ್ ತಿಳಿಸಿದ್ದಾರೆ.
ಮೇಳದಲ್ಲಿ ಸಿಗುವ ಭಕ್ಷಗಳು: ಹಿತಕಬೇಳೆ ಹೋಳಿಗೆ, ಅವರೆಕಾಳು ಉಪ್ಪಿಟ್ಟು, ಹಿತಕಬೇಳೆ ಜಾಮೂನು, ಹಿತಕಬೇಳೆ ಅಕ್ಕಿ, ಅವರೆಬೇಳೆ ಮಲ್ಲಿಗೆ ಇಡ್ಲಿ, ಅವರೆಕಾಳು ಹುಸ್ಲಿ, ಪುದೀನ ಹಿತಕಬೇಳೆ, ಹಿತಕಬೇಳೆ ಹಲ್ವ, ಕರಿಬೇವು ಹಿತಕಬೇಳೆ ಸೇರಿದಂತೆ ಹತ್ತಾರು ಬಗೆಯ ತಿನಿಸುಗಳು ಸಿಗುತ್ತವೆ. ಶಾಸಕ ಆರ್.ವಿ.ದೇವರಾಜ್ ಅವರೆಬೇಳೆ ಮೇಳವನ್ನು ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯೆ ತಾರಾ, ಚಿತ್ರ ನಟಿ ರೂಪಿಕಾ ಮತ್ತಿತರರು ಮೇಳದಲ್ಲಿ ಭಾಗವಹಿಸಿ ಅವರೆ ಬೇಳೆಯ ರುಚಿಯನ್ನು ಸವಿದರು.





