ಎಫ್‌ಟಿಐಐ ಅಧ್ಯಕ್ಷರಾಗಿ ಚೌಹಾಣ್ ಪದಗ್ರಹಣ: ವಿದ್ಯಾರ್ಥಿಗಳ ಪ್ರತಿಭಟನೆ; ಲಾಠಿಚಾರ್ಜ್

ಪುಣೆ, ಜ. 7: ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (ಎಫ್‌ಟಿಐಐ)ಯ ವಿದ್ಯಾರ್ಥಿಗಳ ಪ್ರತಿಭಟನೆಯ ನಡುವೆಯೇ ಸಂಸ್ಥೆಯ ಅಧ್ಯಕ್ಷರಾಗಿ ಟಿವಿ ನಟ ಹಾಗೂ ರಾಜಕಾರಣಿ ಗಜೇಂದ್ರ ಚೌಹಾಣ್ ಗುರುವಾರ ಅಧಿಕಾರ ವಹಿಸಿಕೊಂಡರು. ಅಧಿಕಾರ ವಹಿಸಿಕೊಂಡ ಬಳಿಕ ಚೌಹಾಣ್ ಎಫ್‌ಟಿಐಐ ಸೊಸೈಟಿಯ ಸಭೆಯಲ್ಲಿ ಪಾಲ್ಗೊಂಡರು. ಈ ಸಭೆಯು ರಾಜ್‌ಕುಮಾರ್ ಹಿರಾನಿ, ಬಿ.ಪಿ. ಸಿಂಗ್, ಸತೀಶ್ ಶಾ, ಪ್ರಾಂಜಲ್ ಸೈಕಿಯ, ನರೇಂದ್ರ ಪಾಠಕ್ ಮತ್ತು ಭಾವನಾ ಸೋಮಯ್ಯರನ್ನು ಆಡಳಿತ ಮಂಡಳಿಯ ಸದಸ್ಯರಾಗಿ ನೇಮಕ ಮಾಡಿತು.
14 ಸದಸ್ಯರ ಆಡಳಿತ ಮಂಡಳಿಯು ಸಂಸ್ಥೆಯ ಆಡಳಿತವನ್ನು ನೋಡಿಕೊಂಡರೆ, 24 ಸದಸ್ಯರನ್ನು ಒಳಗೊಂಡಿರುವ ಎಫ್‌ಟಿಐಐ ಸೊಸೈಟಿಯನ್ನು ದೇಶದ ಮಹತ್ವದ ಚಲನಚಿತ್ರ ಸಂಸ್ಥೆಯ ಸರ್ವೋಚ್ಚ ಸಮಿತಿಯೆಂಬುದಾಗಿ ಪರಿಗಣಿಸಲಾಗುತ್ತದೆ.
ಸಭೆಯು ಡಿಸೆಂಬರ್ 18ರಂದು ನಡೆಯಬೇಕಾಗಿತ್ತು. ಆದರೆ, ಕೆಲವು ಸದಸ್ಯರ ಅಲಭ್ಯತೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.
ಇದಕ್ಕೂ ಮೊದಲು, ತನ್ನ ನೇಮಕಾತಿಯ ಬಳಿಕ ಮೊದಲ ಬಾರಿಗೆ ಸಂಸ್ಥೆಗೆ ಆಗಮಿಸಿದ ಚೌಹಾಣ್‌ರಿಗೆ ದಾರಿ ಬಿಡಲು ಪ್ರತಿಭಟನಾನಿರತ ವಿದ್ಯಾರ್ಥಿಗಳು ನಿರಾಕರಿಸಿದರು. ಆಗ ಪೊಲೀಸರು ಲಾಠಿಚಾರ್ಜ್ ಮಾಡಿದರು. ಆವರಣದ ಹೊರಗೆ ಕನಿಷ್ಠ 40 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದರು.
ಏಳು ತಿಂಗಳ ಹಿಂದೆ ಚೌಹಾಣ್‌ರನ್ನು ಸಂಸ್ಥೆಯ ಮುಖ್ಯಸ್ಥರನ್ನಾಗಿ ನೇಮಿಸಿದಾಗ ವಿದ್ಯಾರ್ಥಿಗಳು ಭಾರೀ ಪ್ರತಿಭಟನೆ ನಡೆಸಿರುವುದನ್ನು ಸ್ಮರಿಸಬಹುದಾಗಿದೆ.
ಪೊಲೀಸ್ ಲಾಠಿ ಚಾರ್ಜ್ ಹೊರತಾಗಿಯೂ, ತಾವು ಶಾಂತಿಯುತ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ವಿದ್ಯಾರ್ಥಿ ನಾಯಕರು ಘೋಷಿಸಿದ್ದಾರೆ.
ಚೌಹಾಣ್ ನೇಮಕಾತಿಯನ್ನು ವಿರೋಧಿಸಿ ವಿದ್ಯಾರ್ಥಿಗಳು 139 ದಿನಗಳ ಕಾಲ ಪ್ರತಿಭಟನೆ ನಡೆಸಿರುವುದನ್ನು ಸ್ಮರಿಸಬಹುದಾಗಿದೆ. ನೂತನ ಅಧ್ಯಕ್ಷರು ‘‘ಯೋಗ್ಯತೆ’’ ಮತ್ತು ‘‘ದೂರದೃಷ್ಟಿ’’ಯನ್ನು ಹೊಂದಿಲ್ಲ ಎನ್ನುವುದು ವಿದ್ಯಾರ್ಥಿಗಳ ದೂರು.







