ಮರೆಯಾದ ಮುಫ್ತಿ

ಹೊಸದಿಲ್ಲಿ, ಜ.7: ರಾಜಕೀಯವಾಗಿ ಪ್ರಭಾವಶಾಲಿಯಾಗಿರುವ ಅಬ್ದುಲ್ಲಾ ಕುಟುಂಬವನ್ನು ಎದುರು ಹಾಕಿಕೊಂಡು ಕುಶಲ ರಾಜಕಾರಣಿಯಾಗಿ ರೂಪುಗೊಂಡು ದೇಶದ ಮೊದಲ ಮುಸ್ಲಿಮ್ ಗೃಹಸಚಿವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್(79) ಅವರು ಗುರುವಾರ ದೇಹದಲ್ಲಿನ ಪ್ಲೇಟ್‌ಲೆಟ್ ಕಣಗಳು ಅಪಾಯಕಾರಿ ಮಟ್ಟಕ್ಕೆ ಕುಸಿದ ಬಳಿಕ ಇಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾಗಿ ಕಳೆದ ವರ್ಷದ ಮಾ.1ರಂದು ಅಧಿಕಾರ ವಹಿಸಿಕೊಂಡಿದ್ದ ಸಯೀದ್‌ಗೆ ಕಳೆದ ಕೆಲವು ದಿನಗಳಿಂದ ಜೀವರಕ್ಷಕ ಸಾಧನವನ್ನು ಅಳವಡಿಸಲಾಗಿದ್ದು, ಇಂದು ಬೆಳಗ್ಗೆ ಕೊನೆಯುಸಿರೆಳೆದರು.
ಸಯೀದ್‌ರನ್ನು ಡಿ.24ರಂದು ವಿಶೇಷ ವಿಮಾನದಲ್ಲಿ ದಿಲ್ಲಿಗೆ ಕರೆತಂದು ಏಮ್ಸ್‌ಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಪ್ರಾಣಾಂತಿಕ ಸೋಂಕು ಮತ್ತು ನ್ಯುಮೋನಿಯಾ ಇರುವುದು ಪತ್ತೆಯಾಗಿತ್ತು. ಚಿಕಿತ್ಸೆಯ ಅವಧಿಯಲ್ಲಿ ಅವರ ಪ್ಲೇಟ್‌ಲೆಟ್‌ಗಳ ಪ್ರಮಾಣವೂ ಅಪಾಯಕಾರಿ ಮಟ್ಟಕ್ಕೆ ಕುಸಿದಿತ್ತು ಎಂದು ವೈದ್ಯರು ತಿಳಿಸಿದರು.
ಅವರು ಅಧಿಕಾರದಲ್ಲಿ ಇರುವಾಗಲೇ ನಿಧನರಾದ ಜಮ್ಮ-ಕಾಶ್ಮೀರದ ಎರಡನೆ ಮುಖ್ಯಮಂತ್ರಿಯಾಗಿದ್ದಾರೆ. ಇದಕ್ಕೂ ಮುನ್ನ 1982,ಸೆ.8ರಂದು ಆಗಿನ ಮುಖ್ಯಮಂತ್ರಿ ಶೇಖ್ ಮುಹಮ್ಮದ್ ಅಬ್ದುಲ್ಲಾ ನಿಧನರಾಗಿದ್ದರು.
ಸಯೀದ್‌ರ ಪುತ್ರಿ 56ರ ಹರೆಯದ ಮೆಹಬೂಬಾ ಅವರು ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ. ಪಿಡಿಪಿ ನಾಯಕರು ಅವರ ಬೆಂಬಲಕ್ಕೆ ನಿಂತಿದ್ದಾರಾದರೂ ಇದಕ್ಕೆ ಬಿಜೆಪಿಯ ಅನುಮತಿ ಅಗತ್ಯವಾಗಿದೆ.
ಸಯೀದ್ ಪತ್ನಿ,ಮೂವರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.
ಜಮ್ಮು-ಕಾಶ್ಮೀರ ಸರಕಾರವು ಗುರುವಾರ ರಜೆಯನ್ನು ಸಾರಿದ್ದು, ಏಳು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಈ ಅವಧಿಯಲ್ಲಿ ಧ್ವಜಗಳು ಅರ್ಧ ಮಟ್ಟದಲ್ಲಿ ಹಾರಾಡಲಿವೆ.
ಸಯೀದ್‌ರ ಪಾರ್ಥಿವ ಶರೀರವನ್ನು ಮಧ್ಯಾಹ್ನದ ಬಳಿಕ ಶ್ರೀನಗರಕ್ಕೆ ಒಯ್ದು ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಅವರ ಗುಪ್ಕರ್ ನಿವಾಸದಲ್ಲಿ ಇರಿಸಲಾಗಿತ್ತು.
ಅವರ ಹುಟ್ಟೂರು, ಅನಂತ್‌ನಾಗ್ ಜಿಲ್ಲೆಯ ಬಿಜ್‌ಬೆಹರಾದಲ್ಲಿ ಪೂರ್ವಜರ ಸಮಾಧಿ ಸ್ಥಳದಲ್ಲಿ ಅಂತ್ಯಸಂಸ್ಕಾರ ನಡೆಯಿತು ತಿಳಿಸಿವೆ.
ಸಯೀದ್ ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾಗಿ ಕಳೆದ ವರ್ಷದ ಮಾ.1ರಂದು ಗದ್ದುಗೆಯನ್ನೇರಿದ್ದರು. 87 ಸದಸ್ಯ ಬಲದ ಜಮ್ಮು-ಕಾಶ್ಮೀರ ವಿಧಾನ ಸಭೆಯಲ್ಲಿ ಪಿಡಿಪಿ 28 ಮತ್ತು ಬಿಜೆಪಿ 25 ಸ್ಥಾನಗಳನ್ನು ಗೆದ್ದಿದ್ದರೆ,ನ್ಯಾಷನಲ್ ಕಾನ್ಫ್‌ರೆನ್ಸ್ 15 ಮತ್ತು ಕಾಂಗ್ರೆಸ್ 12 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದ್ದವು.







