ಜಮ್ಮು-ಕಾಶ್ಮೀರದ ಪ್ರಥಮ ಮಹಿಳಾ ಮುಖ್ಯಮಂತ್ರಿಯಾಗಲು ಮೆಹಬೂಬ ಸಜ್ಜು

ಹೊಸದಿಲ್ಲಿ, ಜ.7: 79 ವರ್ಷದ ಮುಫ್ತಿ ಮುಹಮ್ಮದ್ ಸಯೀದ್ ಭಾರತದ ಅತ್ಯಂತ ಪ್ರಭಾವಿ ಕಾಶ್ಮೀರಿ ರಾಜಕಾರಣಿಗಳ ಪೈಕಿ ಒಬ್ಬರು ಎನ್ನುವುದು ನಿರ್ವಿವಾದ. ಆದರೆ, ಕಾಶ್ಮೀರ ಕಣಿವೆಯ ಜನರಿಗೆ, ಸಯೀದ್‌ರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ)ಯೆಂದರೆ ಅವರ ಮಗಳು ಮೆಹಬೂಬಾ ಮುಫ್ತಿ.
ಸಯೀದ್ ಗುರುವಾರ ನಿಧನರಾದ ಹಿನ್ನೆಲೆಯಲ್ಲಿ, 56 ವರ್ಷದ ಮೆಹಬೂಬ ಜಮ್ಮು ಮತ್ತು ಕಾಶ್ಮೀರದ ಪ್ರಥಮ ಮಹಿಳಾ ಮುಖ್ಯಮಂತ್ರಿಯಾಗುವ ಎಲ್ಲ ಸಾಧ್ಯತೆಗಳಿವೆ.
ಕಾಶ್ಮೀರ ವಿಶ್ವವಿದ್ಯಾನಿಲಯದ ಕಾನೂನು ಪದವೀಧರೆಯಾಗಿರುವ ಮೆಹಬೂಬ ರಾಜಕೀಯಕ್ಕೆ ಕಾಲಿಡುವಾಗ ಹೆಚ್ಚಿನವರಿಗೆ ಅಪರಿಚಿತೆಯಾಗಿದ್ದರು. ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿರುವ ಅವರು 1996ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದರು. ಆಗ ಒಮ್ಮೆಲೇ ಇಡೀ ಕಾಶ್ಮೀರಕ್ಕೆ ಅವರ ಬಗ್ಗೆ ತಿಳಿಯಿತು.
ಆರು ವರ್ಷಗಳ ರಾಜ್ಯಪಾಲರ ಆಡಳಿತದ ಬಳಿಕ, 1996ರಲ್ಲಿ ರಾಜ್ಯದಲ್ಲಿ ಚುನಾವಣಾ ಪ್ರಕ್ರಿಯೆ ನಡೆದಾಗ ಅವರು ರಾಜಕೀಯಕ್ಕೆ ಧುಮುಕಿದರು. ಆಗ ರಾಜ್ಯ ಕಾಂಗ್ರೆಸ್ ಮುಖ್ಯಸ್ಥರಾಗಿದ್ದ ಸಯೀದ್‌ಗೆ ಪಕ್ಷದಿಂದ ಸ್ಪರ್ಧಿಸಲು ಹೆಚ್ಚಿನ ಅಭ್ಯರ್ಥಿಗಳು ಸಿಗಲಿಲ್ಲ. ಹಾಗಾಗಿ, ಅವರು ಪತ್ನಿ ಗುಲ್ಶನ್ ಆರ ಮತ್ತು ಮಗಳು ಮೆಹಬೂಬರನ್ನು ಚುನಾವಣೆಗೆ ನಿಲ್ಲಿಸಿದರು. ಚುನಾವಣೆಯಲ್ಲಿ ದಂಪತಿ ಸೋತರು, ಆದರೆ ಮೆಹಬೂಬ ದಕ್ಷಿಣ ಕಾಶ್ಮೀರ ಕ್ಷೇತ್ರದಿಂದ ವಿಜಯಿಯಾದರು.
ಸಯೀದ್‌ರ ನಾಲ್ವರು ಮಕ್ಕಳ ಪೈಕಿ ಮೆಹಬೂಬಾ ಹಿರಿಯಾಕೆ. ಅವರೇ ತನ್ನ ತಂದೆಯ ರಾಜಕೀಯ ಪರಂಪರೆಯನ್ನು ಬಳುವಳಿಯಾಗಿ ಪಡೆದುಕೊಂಡು ಬಂದವರು. ಅವರ ಇತರ ಮೂವರು ಮಕ್ಕಳು ರಾಜಕೀಯದಲ್ಲಿ ಆಸಕ್ತಿ ವಹಿಸಿಲ್ಲ. ಅವರ ಮಗ ತಸಾದುಖ್ ಸಿನೆಮಾ ಛಾಯಾಗ್ರಾಹಕರಾಗಿದ್ದಾರೆ.
ವಾಸ್ತವವಾಗಿ, ಕಾಶ್ಮೀರದಲ್ಲಿರುವ ದಿಲ್ಲಿಯ ವ್ಯಕ್ತಿ ಎಂಬುದಾಗಿ ಸುದೀರ್ಘ ಕಾಲ ಪರಿಗಣಿಸಲ್ಪಟ್ಟ ಸಯೀದ್ ಮೆಹಬೂಬರ ಪ್ರಯತ್ನಗಳಿಂದಾಗಿಯೇ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾದರು.
1999ರಲ್ಲಿ ಕಾಂಗ್ರೆಸ್‌ನಿಂದ ಬೇರ್ಪಡಲು ಸಯೀದ್ ನಿರ್ಧರಿಸಿದಾಗ, ರಾಜ್ಯದಲ್ಲಿ ನೂತನ ಪಕ್ಷವನ್ನು ಕಟ್ಟುವ ಹೊಣೆಯನ್ನು ಮೆಹಬೂಬ ತನ್ನ ಹೆಗಲ ಮೇಲೆ ಹೊತ್ತುಕೊಂಡರು.
ಆಗ ತನ್ನ ವಯಸ್ಸಿನ 40ರ ದಶಕದಲ್ಲಿದ್ದ ಮೆಹಬೂಬ ಜನರ ನಾಡಿಯನ್ನು ತಿಳಿದುಕೊಂಡು ಮೃದು-ಪ್ರತ್ಯೇಕತಾವಾದಿ ನಿಲುವನ್ನು ತೆಗೆದುಕೊಂಡರು. ನೂತನ ಪಕ್ಷದ ಧ್ವಜವು ನ್ಯಾಶನಲ್ ಕಾನ್ಫರೆನ್ಸ್‌ನ ಬದ್ಧ ರಾಜಕೀಯ ಎದುರಾಳಿ ಮುಸ್ಲಿಂ ಯುನೈಟೆಡ್ ಫ್ರಂಟ್‌ನ ಚುನಾವಣಾ ಚಿಹ್ನೆಯನ್ನು ಸ್ಥೂಲವಾಗಿ ಹೋಲುತ್ತಿತ್ತು.
ಅಕ್ರಮ ನಡೆಯಿತೆಂದು ಹೇಳಲಾದ 1987ರ ಚುನಾವಣೆಯ ಬಳಿಕ ಮುಸ್ಲಿಂ ಯುನೈಟೆಡ್ ಫ್ರಂಟ್‌ನ ಹೆಚ್ಚಿನ ನಾಯಕರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡಿದ್ದರು.
ಸಾಂಪ್ರದಾಯಿಕ ಕಾಶ್ಮೀರಿ ಉಡುಪು ಫೈರನ್ ಮತ್ತು ಕ್ರೀಡಾ ಶೂಗಳನ್ನು ಧರಿಸಿದ ಮೆಹಬೂಬ, ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಮೃತಪಟ್ಟ ನಾಗರಿಕರು ಮತ್ತು ಭಯೋತ್ಪಾದಕರ ಕುಟುಂಬಗಳು ಹಾಗೂ ಮಾನವಹಕ್ಕು ಉಲ್ಲಂಘನೆ ಪ್ರಕರಣಗಳ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿದರು. ಗ್ರಾಮೀಣ ಮಹಿಳೆಯರ ಸಮಸ್ಯೆಗಳು ಮತ್ತು ಕಷ್ಟಗಳನ್ನು ಆಲಿಸಿದರು, ಅವರ ಕಣ್ಣೀರನ್ನು ಒರೆಸಿದರು, ಸಾಂತ್ವನದ ಮಾತುಗಳನ್ನು ಆಡಿದರು ಹಾಗೂ ಅವರಿಗೆ ಧೈರ್ಯ ತುಂಬಿದರು.
ನ್ಯಾಶನಲ್ ಕಾನ್ಫರೆನ್ಸ್‌ನ ತಂದೆ-ಮಗ ಫಾರೂಕ್ ಅಬ್ದುಲ್ಲಾ ಮತ್ತು ಉಮರ್ ಅಬ್ದುಲ್ಲಾರಿಗೆ ಪರ್ಯಾಯವೆಂಬುದಾಗಿ ಮೆಹಬೂಬ ಪರಿಗಣಿಸಲ್ಪಟ್ಟಾಗ, ಅವರ ಕುರಿತ ಸುದ್ದಿಗಳು ಸ್ಥಳೀಯ ಪತ್ರಿಕೆಗಳ ಪುಟಗಳನ್ನು ತುಂಬಿದವು. ಆದರೆ, 2002ರ ವಿಧಾನಸಭೆ ಚುನಾವಣೆಯಲ್ಲಿ ಸಯೀದ್ ರಾಜಕೀಯ ರಂಗದಲ್ಲಿ ಮತ್ತೆ ಕಾಣಿಸಿಕೊಂಡರು. ಆ ಚುನಾವಣೆಯಲ್ಲಿ ಪಿಡಿಪಿ ಭಾರೀ ಮುನ್ನಡೆ ಪಡೆಯಿತು ಹಾಗೂ ಕಾಂಗ್ರೆಸ್‌ನೊಂದಿಗೆ ಸೇರಿ ಸಮ್ಮಿಶ್ರ ಸರಕಾರ ನಡೆಸಿತು. ಆದಾಗ್ಯೂ, ಆ ಚುನಾವಣೆಯಲ್ಲಿ ನ್ಯಾಶನಲ್ ಕಾನ್ಫೆರೆನ್ಸ್ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು.
ಮೂರು ವರ್ಷಗಳ ಪಿಡಿಪಿ ಆಳ್ವಿಕೆಯಲ್ಲಿ ಮೆಹಬೂಬ ಪಕ್ಷದ ವಿವೇಕದ ಧ್ವನಿಯಾಗಿ ಹೊರಹೊಮ್ಮಿದರು ಹಾಗೂ ಹಲವು ಸಂದರ್ಭಗಳಲ್ಲಿ ತನ್ನದೇ ಪಕ್ಷದ ನಿಲುವುಗಳೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದರು. ಅಮರನಾಥ ದೇವಾಲಯಕ್ಕೆ ವಿವಾದಾಸ್ಪದ ಭೂ ವರ್ಗಾವಣೆಯ ಹಿನ್ನೆಲೆಯಲ್ಲಿ, ಪಿಡಿಪಿಯ ಸಹ ಸಂಸ್ಥಾಪಕ ತಾರಿಖ್ ಹಮೀದ್ ಕರ್ರಾ ಜೊತೆಗೆ ಸೇರಿಕೊಂಡು ಕಾಂಗ್ರೆಸ್-ಪಿಡಿಪಿ ಮೈತ್ರಿಕೂಟವನ್ನು ಮುರಿಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಬಳಿಕ, ಆರು ವರ್ಷಗಳ ಉಮರ್ ಅಬ್ದುಲ್ಲಾ ಆಳ್ವಿಕೆಯ ಅವಧಿಯಲ್ಲಿ ನ್ಯಾಶನಲ್ ಕಾನ್ಫರೆನ್ಸ್ ವಿರುದ್ಧ ಮತ್ತೊಮ್ಮೆ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಕಳಪೆ ಆಡಳಿತ ಮತ್ತು ಭದ್ರತಾ ಪಡೆಗಳು ನಡೆಸಿರುವ ಹತ್ಯೆಗಳನ್ನು ಈ ಅವಧಿಯಲ್ಲಿ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಆಕೆಯ ಛಲದ ಪರಿಣಾಮವಾಗಿ 2014ರ ಚುನಾವಣೆಯಲ್ಲಿ ಪಕ್ಷ ಮತ್ತೊಮ್ಮೆ ಉತ್ತಮ ಸಾಧನೆಯನ್ನು ದಾಖಲಿಸಿತು.
ಬಿಜೆಪಿಯೊಂದಿಗೆ ಮೈತ್ರಿ ಏರ್ಪಡುವ ಸಂದರ್ಭದಲ್ಲೂ, ತನ್ನ ತಂದೆ ಆರು ವರ್ಷಗಳ ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿ ಅಂಗೀಕಾರಗೊಳ್ಳುವುದನ್ನು ಅವರು ಖಾತರಿಪಡಿಸಿದರು ಎನ್ನಲಾಗಿದೆ.
ಕಳೆದ ವರ್ಷದ ಮಾರ್ಚ್‌ನಲ್ಲಿ ಪಿಡಿಪಿ-ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದ ಬಳಿಕ ಮೆಹಬೂಬ ಹಿನ್ನೆಲೆಗೆ ಸರಿದಿದ್ದರು. ಆದರೆ, ಮುಖ್ಯಮಂತ್ರಿ ಸಯೀದ್‌ರ ಅನಾರೋಗ್ಯದ ಕುರಿತ ವರದಿಗಳು ಕಳೆದ ಮಳೆಗಾಲದಲ್ಲಿ ಹೊರಬಿದ್ದಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಆರಂಭಿಸಿದರು.
ನಾಯಕತ್ವದಲ್ಲಿ ಬದಲಾವಣೆ ಮಾಡಲು ಪಿಡಿಪಿ ಯೋಚಿಸುತ್ತಿದೆ ಎಂಬ ಊಹಾಪೋಹಗಳು ಮುಖ್ಯಮಂತ್ರಿಯ ಆರೋಗ್ಯ ಹದಗೆಟ್ಟಾಗ ಜೋರಾಗಿ ಕೇಳಿಬಂದವು.
ಪಕ್ಷವು ಮೆಹಬೂಬ ಮೇಲೆ ಭರವಸೆ ವ್ಯಕ್ತಪಡಿಸಿತು ಹಾಗೂ ತನ್ನ ಪುತ್ರಿ ತನ್ನ ರಾಜಕೀಯ ವಾರೀಸುದಾರೆಯಾಗಬಹುದು ಎಂಬ ಇಂಗಿತವನ್ನು ದಿವಂಗತ ಮುಖ್ಯಮಂತ್ರಿ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ನಾಯಕತ್ವ ಬದಲಾವಣೆ ಪ್ರಕ್ರಿಯೆ ಸಾಂಗವಾಗಿ ನಡೆಯುವ ವಿಶ್ವಾಸವನ್ನು ಪಕ್ಷದ ಹಿರಿಯ ನಾಯಕರು ವ್ಯಕ್ತಪಡಿಸಿದ್ದಾರೆ.
‘‘ನಮ್ಮ ಎಲ್ಲ 28 ಶಾಸಕರು ಮೆಹಬೂಬರನ್ನು ಬೆಂಬಲಿಸುತ್ತಿದ್ದಾರೆ. ಮುಝಫ್ಫರ್ ಹುಸೇನ್ ಬೇಗ್ ಕೂಡ ಆಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ’’ ಎಂದು ಮೂಲವೊಂದು ತಿಳಿಸಿದೆ.
ಆದರೆ, ಪಿಡಿಪಿ ಸಂಸದರಾದ ಬೇಗ್ ಮತ್ತು ತಾರಿಖ್ ಕರ್ರಾ ನಾಯಕತ್ವ ಬದಲಾವಣೆ ಪ್ರಕ್ರಿಯೆಯನ್ನು ಜಟಿಲಗೊಳಿಸಬಹುದಾಗಿದೆ. ಬಿಜೆಪಿಯೊಂದಿಗೆ ಮೈತ್ರಿಯನ್ನು ಈ ಇಬ್ಬರು ನಾಯಕರು ವಿರೋಧಿಸಿದ್ದರು. ಬಳಿಕ ಬೇಗ್ ಮೈತ್ರಿಗೆ ಸಹಮತ ವ್ಯಕ್ತಪಡಿಸಿದ್ದರೂ, ಬಿಜೆಪಿಯೊಂದಿಗೆ ಅಂತರ ಕಾಯ್ದುಕೊಳ್ಳಬೇಕು ಎಂಬ ಇಚ್ಛೆಯನ್ನು ಸ್ಥಾಪಕ ಸದಸ್ಯ ಕರ್ರಾ ಈಗಲೂ ಹೊಂದಿದ್ದಾರೆ ಎನ್ನಲಾಗಿದೆ.
ಪಕ್ಷದ ಆರಂಭಿಕ ದಿನಗಳಲ್ಲಿ ಪಕ್ಷದ ಪ್ರಮುಖ ನಿಧಿ ಪೂರೈಕೆದಾರರಾಗಿದ್ದ ಕರ್ರಾ, ‘‘ಶ್ರೀನಗರ ವ್ಯಕ್ತಿ’’ಯೂ ಹೌದು.
2014ರ ಲೋಕಸಭಾ ಚುನಾವಣೆಯಲ್ಲಿ, ಅಜೇಯರೆಂದು ಪರಿಗಣಿಸಲಾಗಿದ್ದ ನ್ಯಾಶನಲ್ ಕಾನ್ಫರೆನ್ಸ್‌ನ ಅಧ್ಯಕ್ಷ ಫಾರೂಕ್ ಅಬ್ದುಲ್ಲಾರನ್ನು ಸೋಲಿಸಿದ್ದಾರೆ. ಆದಾಗ್ಯೂ, ಗ್ರಾಮೀಣ ಭಾಗದಲ್ಲಿ ಪ್ರಮುಖ ನೆಲೆ ಹೊಂದಿರುವ ಪಕ್ಷಕ್ಕೆ ಕರ್ರಾ ಭಿನ್ನಮತ ದೊಡ್ಡ ಹೊಡೆತ ನೀಡಲಾರದು ಎಂದು ಭಾವಿಸಲಾಗಿದೆ.
ಮೆಹಬೂಬ ಮುಖ್ಯಮಂತ್ರಿಯಾದರೆ ಅತ್ಯಂತ ಹಿರಿಯ ನಾಯಕರಾಗಿರುವ ಬೇಗ್ ಪಕ್ಷದ ಅಧ್ಯಕ್ಷರಾಗುವ ಸಾಧ್ಯತೆಯಿದೆ.





