ದಿಲ್ಲಿ: ಖಾಸಗಿ ಶಾಲೆಗಳ ನರ್ಸರಿ ಪ್ರವೇಶ ಕೋಟಾ ರದ್ದು
ಹೊಸದಿಲ್ಲಿ, ಜ. 7: ದಿಲ್ಲಿಯ ನರ್ಸರಿ ಶಾಲೆಗಳ 20 ಶೇಕಡಾ ಮ್ಯಾನೇಜ್‌ಮೆಂಟ್ ಕೋಟಾವನ್ನು ದಿಲ್ಲಿ ಸರಕಾರ ಬುಧವಾರ ರದ್ದುಪಡಿಸಿದೆ ಹಾಗೂ ಆಹಾರ ಅಭ್ಯಾಸಗಳು ಮತ್ತು ಹೆತ್ತವರ ವೃತ್ತಿಗಳು ಮುಂತಾದ ‘ತಾರತಮ್ಯ’ ಧೋರಣೆಯ ಮಾನದಂಡಗಳನ್ನು ಆಧರಿಸಿ ಅಂಕಗಳನ್ನು ನೀಡುವ ಶಾಲೆಗಳ ಪ್ರವೃತ್ತಿಗೆ ಅಂಕುಶ ಹಾಕಿದೆ.
ಇದು ತಮ್ಮ ‘ಸ್ವಾಯತ್ತೆ’ ಮೇಲಿನ ದಾಳಿ ಎಂಬುದಾಗಿ ಬಣ್ಣಿಸಿರುವ ಹಲವಾರು ಶಾಲೆಗಳು ಸರಕಾರದ ಆದೇಶದ ವಿರುದ್ಧ ನ್ಯಾಯಾಲಯಕ್ಕೆ ಹೋಗುವ ಬೆದರಿಕೆಯನ್ನು ಹಾಕಿವೆ. ಹಾಗಾಗಿ, ನರ್ಸರಿ ಶಾಲೆಗಳ ಪ್ರವೇಶಾತಿಯಲ್ಲಿ ವಿಳಂಬವಾಗುವ ಸಾಧ್ಯತೆಗಳಿವೆ. ಶಾಲೆಗಳು ತಮ್ಮ ಅಂಕಗಳನ್ನು ಮರುಹೊಂದಾಣಿಕೆ ಮಾಡಿ ನೂತನ ಮಾನದಂಡಗಳನ್ನು ಹೊರಡಿಸಬೇಕಿರುವುದರಿಂದ ಪೋಷಕರೂ ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿಯೂ ಇದೆ.
ಪ್ರವೇಶ ಮಟ್ಟದ ತರಗತಿಗಳಿಗೆ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸುವ ಸರಕಾರದ ಈ ಮೊದಲಿನ ನಿರ್ಧಾರವನ್ನು ಎರಡು ವರ್ಷದ ಮಗುವೊಂದು ದಿಲ್ಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಈಗ ಹೊಸದಾಗಿ ನ್ಯಾಯಾಲಯದಲ್ಲಿ ಮತ್ತೊಂದು ಸುತ್ತಿನ ಖಟ್ಲೆಗಳು ದಾಖಲಾಗುವುದು ನಿಶ್ಚಿತ.
‘‘ನರ್ಸರಿ ಶಾಲೆಗಳ ಪ್ರವೇಶಕ್ಕೆ ಮ್ಯಾನೇಜ್‌ಮೆಂಟ್ ಕೋಟಾ ಇರುವುದಿಲ್ಲ. ಮ್ಯಾನೇಜ್‌ಮೆಂಟ್ ಕೋಟಾ ಎನ್ನುವುದು ಭಾರತದ ಅತಿ ದೊಡ್ಡ ಹಗರಣವಾಗಿದೆ. ಅದು ಹಣವನ್ನು ಲೂಟಿ ಮಾಡುವ ಒಂದು ವಿಧಾನ’’ ಎಂದು ಪತ್ರಿಕಾಗೋಷ್ಠಿಯೊಂದರಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.
ಅದೇ ವೇಳೆ, ‘‘ತಾರತಮ್ಯಕಾರಿ’’ ಎಂದು ತಾನು ಪರಿಗಣಿಸಿದ 62 ಮಾನದಂಡಗಳ ಪಟ್ಟಿಯನ್ನೂ ಸರಕಾರ ಬಿಡುಗಡೆ ಮಾಡಿದೆ. ಈ ಮಾನದಂಡಗಳನ್ನು ರದ್ದುಪಡಿಸಬೇಕು ಎಂದು ಅದು ಹೇಳಿದೆ.
ಸರಕಾರದ ಆದೇಶವನ್ನು ಉಲ್ಲಂಘಿಸುವ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸಲಾಗುವುದು ಅಥವಾ ಸರಕಾರವೇ ಅವುಗಳನ್ನು ನಡೆಸುವುದು ಎಂದು ಕೇಜ್ರಿವಾಲ್ ನುಡಿದರು.
ಆದಾಗ್ಯೂ, ತಮ್ಮದೇ ಆದ ಮಾನದಂಡಗಳನ್ನು ನಿಗದಿಪಡಿಸುವ ಶಾಲೆಗಳ ಸ್ವಾತಂತ್ರವನ್ನು ಆದೇಶವು ಕಸಿದುಕೊಂಡಿಲ್ಲ ಎಂದು ಅವರು ಹೇಳಿದರು.





