ಪರ್ಯಾಯ: ಉಡುಪಿ ನಗರದಲ್ಲಿ ರಸ್ತೆ ಸಂಚಾರ ಬದಲಾವಣೆ
ಉಡುಪಿ, ಜ.7: ಉಡುಪಿ ಕೃಷ್ಣಮಠದಲ್ಲಿ ಜರಗುವ ಪರ್ಯಾಯ ಮಹೋತ್ಸವದ ಪ್ರಯುಕ್ತ ಜ.17ರ ಬೆಳಗ್ಗೆ 9ರಿಂದ 18ರ ಬೆಳಗ್ಗೆ 9ರವರೆಗೆ ಉಡುಪಿ ನಗರಕ್ಕೆ ಬರುವ ಹಾಗೂ ನಗರದಿಂದ ಹೊರಹೋಗುವ ವಾಹನಗಳಿಗೆ ಸಂಚಾರದ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಮಂಗಳೂರು-ಬಲಾಯಿಪಾದೆ-ಅಂಬಲ್ಪಾಡಿ ಕಡೆ ಯಿಂದ ಉಡುಪಿ ನಗರಕ್ಕೆ ಬರುವ ಎಲ್ಲಾ ವಾಹನಗಳು ಅಂಬಲಪಾಡಿ ಮುಖೇನ ರಾಷ್ಟ್ರೀಯ ಹೆದ್ದಾರಿ-17ರಲ್ಲಿ ಕರಾವಳಿ ಜಂಕ್ಷನ್ ತಲುಪಿ ಬನ್ನಂಜೆ ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸಬೇಕು. ಉಡುಪಿ ನಗರದ ಸರ್ವಿಸ್ ಹಾಗೂ ಸಿಟಿ ಬಸ್ ನಿಲ್ದಾಣದಿಂದ ಹೊರ ಹೋಗುವ ಎಲ್ಲಾ ವಾಹನಗಳು ಬನ್ನಂಜೆ ಮಾರ್ಗವಾಗಿ ಕರಾವಳಿ ಜಂಕ್ಷನ್‌ನಿಂದ ಮಂಗಳೂರು, ಮಲ್ಪೆಮತ್ತು ಕುಂದಾಪುರ ಕಡೆಗೆ ಸಂಚರಿ ಸಬೇಕು. ಉಡುಪಿ ನಗರದಿಂದ ಕಾರ್ಕಳಕ್ಕೆ ಹೋಗಿ ಬರುವ ಬಸ್‌ಗಳು ಮಣಿಪಾಲದಲ್ಲೇ ಪ್ರಯಾಣಿಕರನ್ನು ಹತ್ತಿಸಬೇಕು ಹಾಗೂ ಇಳಿಸಬೇಕು. ಈ ದಿನಗಳಂದು ಯಾವುದೇ ಕಾರಣಕ್ಕೂ ಅವು ಉಡುಪಿ ನಗರದೊಳಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
ಮಲ್ಪೆ, ಸಂತೆಕಟ್ಟೆ, ಬ್ರಹ್ಮಾವರ ಮತ್ತು ಕುಂದಾಪುರ ಕಡೆಯಿಂದ ಉಡುಪಿ ನಗರಕ್ಕೆ ಬರುವ ಸರ್ವಿಸ್ ಹಾಗೂ ಸಿಟಿ ಬಸ್‌ಗಳು ರಾ.ಹೆ-17ರಲ್ಲಿ ಕರಾವಳಿ ಜಂಕ್ಷನ್ ತಲುಪಿ ಬನ್ನಂಜೆ ಮಾರ್ಗವಾಗಿ ಉಡುಪಿ ಸಿಟಿ ಮತ್ತು ಸರ್ವೀಸ್ ಬಸ್ ನಿಲ್ದಾಣ ಪ್ರವೇಶಿಸಬೇಕು. ಮಂಗಳೂರಿನಿಂದ ಮುಂಬೈಗೆ ಹೋಗುವ ಎಲ್ಲ ಬಸ್‌ಗಳು ಬಲಾಯಿ ಪಾದೆ-ಅಂಬಲ್ಪಾಡಿ-ಕರಾವಳಿ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ನೇರವಾಗಿ ಸಂತೆಕಟ್ಟೆ ಮಾರ್ಗವಾಗಿ ಮುಂಬೈ ಕಡೆಗೆ ತೆರಳಬೇಕು. ಜ.6ರಿಂದ ಜ.31ರವರೆಗೆ ಪೇಜಾವರ ಮಠದ ಹಿಂಭಾಗದಲ್ಲಿ ನಗರಸಭೆ ವತಿಯಿಂದ ದ್ವಿಚಕ್ರ ವಾಹನ ಗಳಿಗೆ ಪೇ ಟು ಪಾರ್ಕಿಂಗ್ ನಿಲುಗಡೆ ಮಾಡುತ್ತಿದ್ದು, ವುಡ್‌ಲ್ಯಾಂಡ್ ಹೊಟೇಲ್‌ನಿಂದ ಪೇಜಾವರ ಮಠದ ಹಿಂಭಾಗದವರೆಗೆ ವಾಹನ ಪಾರ್ಕಿಂಗ್ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.





