725 ಕೋಟಿ ರೂ. ಬಂಡವಾಳ ಹೂಡಿಕೆ ನಿರೀಕ್ಷೆ: ಡಿಸಿ
12ರಂದು ದ.ಕ. ಜಿಲ್ಲಾ ಬಂಡವಾಳ ಹೂಡಿಕೆದಾರರ ಸಮಾವೇಶ
ಮಂಗಳೂರು, ಜ.7: ರಾಜ್ಯ ಸರಕಾರವು ಫೆಬ್ರವರಿ 3ರಿಂದ 5ರವರೆಗೆ ಬೆಂಗಳೂರಿ ನಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪೂರಕವಾಗಿ ದ.ಕ. ಜಿಲ್ಲಾ ಮಟ್ಟದ ಹೂಡಿಕೆ ದಾರರ ಸಮಾವೇಶವನ್ನು ಜ.12ರಂದು ಆಯೋಜಿಸಲಾಗಿದೆ.
ಸಮಾವೇಶದ ಕುರಿತಂತೆ ಇಂದು ಜಿಲ್ಲೆಯ ವಿವಿಧ ಕೈಗಾರಿಕೋದ್ಯಮಿಗಳ ಸಭೆಯ ಬಳಿಕ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಐಒಸಿಎಲ್ ಎಲ್‌ಪಿಜಿ ಬಾಟ್ಲಿಂಗ್ ಸಂಸ್ಥೆ 100 ಕೋಟಿ ರೂ., ಬಿ.ಆರ್. ಶೆಟ್ಟಿ ಸಂಸ್ಥೆ ಸುಮಾರು 200 ಕೋಟಿ ರೂ. ಸೇರಿದಂತೆ ವಿವಿಧ ಕೈಗಾರಿಕಾ ಸಂಸ್ಥೆಗಳಿಂದ ವಿವಿಧ ಕೈಗಾರಿಕೆಗಳ ಸ್ಥಾಪನೆ ನಿಟ್ಟಿನಲ್ಲಿ 725 ಕೋಟಿ ರೂ.ಹೂಡಿಕೆಯನ್ನು ನಿರೀಕ್ಷಿಸಲಾಗಿದೆ ಎಂದರು.
ಬೆಳಗ್ಗೆ 10 ಗಂಟೆಯಿಂದ 2 ಗಂಟೆಯವರೆಗೆ ನಗರದ ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಸಮಾರಂಭ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸುವರು. ಸಚಿವರಾದ ಯು.ಟಿ.ಖಾದರ್, ಅಭಯ ಚಂದ್ರ ಜೈನ್ ಉಪಸ್ಥಿತರಿರುವರು. ನಗರದ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಕೆನರಾ ಚೇಂಬರ್ ಆಫ್ ಕಾಮರ್ಸ್, ಕೆನರಾ ಸಣ್ಣ ಕೈಗಾರಿಕಾ ಸಂಘದ, ಜಿಲ್ಲಾ ಕಿರುಕೈಗಾರಿಕಾ ಸಂಘ ಬೈಕಂಪಾಡಿ, ಸಣ್ಣ ಕೈಗಾರಿಕಾ ಸಂಘ ಪುತ್ತೂರು, ಸಣ್ಣ ಕೈಗಾರಿಕಾ ಸಂಘ ಮುಲ್ಕಿ ಮೊದಲಾದವುಗಳ ಸಹಭಾಗಿತ್ವದಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ತಾಂತ್ರಿಕ ಅಧಿವೇಶನ ಹಾಗೂ ಹೂಡಿಕೆದಾರರೊಂದಿಗೆ ಸಮಾಲೋಚನೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಮಾವೇಶದ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಕೈಗಾರಿಕೋದ್ಯಮಿಗಳು ಜಿಲ್ಲೆಯಲ್ಲಿ ತೆಂಗು ಆಧಾರಿತ ಕೈಗಾರಿಕೆ, ಜವಳಿ ಮತ್ತು ಅಟೋಮೊಬೈಲ್ ಉದ್ದಿಮೆಗೆ ವಿಫುಲ ಅವಕಾಶವಿರುವುದಾಗಿ ತಿಳಿಸಿದರು. ಸಭೆಯಲ್ಲಿ ಮನಪಾ ಜಂಟಿ ಆಯುಕ್ತ ಗೋಕುಲ್‌ದಾಸ್ ನಾಯಕ್, ಕೆಸಿಸಿಐ ಅಧ್ಯಕ್ಷ ರಾಮ್‌ಮೋಹನ್ ಪೈ ಮಾರೂರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು.









