ಅಮೆರಿಕ-ಭಾರತ ಅಧಿಕಾರಿಗಳಿಂದ ಚರ್ಚೆ
ವಾಷಿಂಗ್ಟನ್, ಜ.7: ಅಮೆರಿಕದ ಹಣಕಾಸು ಇಲಾಖೆಯ ಉನ್ನತ ಅಧಿಕಾರಿ ನಾಥನ್ ಶೀಟ್ಸ್ ಸದ್ಯದಲ್ಲೇ ದ್ವಿಪಕ್ಷೀಯ ಆರ್ಥಿಕ ಸಂಬಂಧಗಳು ಹಾಗೂ ಜಾಗತಿಕ ಹಣಕಾಸು ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿ ಹೊಸದಿಲ್ಲಿ ಹಾಗೂ ಮುಂಬೈಯಲ್ಲಿ ಭಾರತದ ಹಣಕಾಸು ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿರುವುದಾಗಿ ಅಧಿಕೃತ ಹೇಳಿಕೆಯೊಂದು ತಿಳಿಸಿದೆ.
ಅಮೆರಿಕದ ಹಣಕಾಸು ಇಲಾಖೆಯಲ್ಲಿರುವ ಅಂತಾರಾಷ್ಟ್ರೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ನಾಥನ್ ಶೀಟ್ಸ್ ಇಷ್ಟರಲ್ಲೇ ಮುಂಬೈಯಲ್ಲಿ ಆರ್‌ಬಿಐ ಹಾಗೂ ಸೆಬಿಯ ಅಧಿಕಾರಿಗಳೊಂದಿಗಿನ ಮಾತುಕತೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಅಮೆರಿಕದ ಹಣಕಾಸು ಇಲಾಖೆ ತಿಳಿಸಿದೆ.
ನಾಥನ್ ಅವರು ಭಾರತದ ಆರ್ಥಿಕ ವಲಯದ ತಜ್ಞರು ಹಾಗೂ ಖಾಸಗಿ ವಲಯದ ಅರ್ಥಶಾಸ್ತ್ರಜ್ಞರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೊಸದಿಲ್ಲಿಯಲ್ಲಿ ಶುಕ್ರವಾರ ತನ್ನ ಸೋದ್ಯೋಗಿಗಳೊಂದಿಗೆ ನಾಥನ್ ಮಾತುಕತೆ ನಡೆಸಲಿದ್ದಾರೆ. ಜಾಗತಿಕ ಆರ್ಥಿಕತೆ ಹಾಗೂ ಉಭಯ ರಾಷ್ಟ್ರಗಳ ನಡುವಿನ ಆರ್ಥಿಕ ಅಭಿವೃದ್ಧಿ ವಿಚಾರವಾಗಿ ಈ ಸಂದರ್ಭದಲ್ಲಿ ದ್ವಿಪಕ್ಷೀಯ ಚರ್ಚೆ ನಡೆಯಲಿದೆ ಎಂದು ಮೂಲಗಳು ವಿವರಿಸಿವೆ.
ಅರ್ಥಿಕ ತಜ್ಞರು ಹಾಗೂ ಸರಕಾರಿ ನೀತಿ ನಿರೂಪಕರೊಂದಿಗೂ ಅವರು ಚರ್ಚಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.