ಸೇನಾ ತರಬೇತಿ ಕೇಂದ್ರಕ್ಕೆ ಬಾಂಬ್ ದಾಳಿ: 60ಕ್ಕೂ ಅಧಿಕ ಮಂದಿಯ ಸಾವು; ಹಲವರಿಗೆ ಗಾಯ
ಟ್ರಿಪೋಲಿ, ಜ.7: ಪಶ್ಚಿಮ ಲಿಬಿಯಾದಲ್ಲಿ ಝಿಲ್ಟೆನ್‌ನಲ್ಲಿರುವ ಸೇನಾ ತರಬೇತಿ ಕೇಂದ್ರವೊಂದರ ಮೇಲೆ ಗುರುವಾರ ಭಾರೀ ಸ್ಫೋಟಕಗಳನ್ನು ತುಂಬಿದ್ದ ಟ್ರಕ್ಕೊಂದನ್ನು ಢಿಕ್ಕಿ ಹೊಡೆಸಿದ ದುಷ್ಕರ್ಮಿಗಳು ನಡೆಸಿದ ದಾಳಿಗೆ ಕನಿಷ್ಠ 65 ಮಂದಿ ಬಲಿಯಾಗಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಬ್ ದಾಳಿ ನಡೆದ ತಕ್ಷಣವೇ ರಕ್ಷಣಾ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, 50ಕ್ಕೂ ಅಧಿಕ ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಫೋಟಕಗಳಿಂದ ತುಂಬಿದ್ದ ಟ್ರಕ್ ಸೇನಾ ತರಬೇತಿ ಕೇಂದ್ರದತ್ತ ನುಗ್ಗಿದ ಬೆನ್ನಲ್ಲೇ ಭಾರೀ ಸ್ಫೊಟದ ಸದ್ದು ಕೇಳಿಸಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಹಲವು ಗಾಯಾಳುಗಳ ಪರಿಸ್ಥಿತಿ ಚಿಂತಾಜನಕವಾಗಿದ್ದು, ಮೃತರ ಸಂಖ್ಯೆಯಲ್ಲಿ ಏರಿಕೆಯಾಗಬಹುದು ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಘಟನೆಯ ಹೊಣೆಯನ್ನು ಯಾವುದೇ ಉಗ್ರಗಾಮಿ ಸಂಘಟನೆ ಇದುವರೆಗೆ ವಹಿಸಿಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಸೇನಾ ತರಬೇತಿ ಕೇಂದ್ರದಲ್ಲಿ ನೇಮಕಾತಿಗಾಗಿ ನೂರಾರು ಅಭ್ಯರ್ಥಿಗಳು ಸೇರಿದ್ದರು ಎಂದು ಝಿಲ್ಟೆನ್‌ನ ಮೇಯರ್ ಮಿಫ್ತಾಹ್ ಲಹ್ಮಾದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.