ಉ.ಕೊರಿಯ ಹೈಡ್ರೋಜನ್ ಬಾಂಬ್ ಪರೀಕ್ಷೆಯಿಂದ ಪಾಕ್‌ನ ಪರಮಾಣು ಪ್ರಸರಣ ದಾಖಲೆ ಬಹಿರಂಗ
ವಾಷಿಂಗ್ಟನ್, ಜ.7: ಪಾಕಿಸ್ತಾನದ ಅಣ್ವಸ್ತ್ರ ಪ್ರಸರಣ ಇತಿಹಾಸ ಹಾಗೂ ಪರಮಾಣು ಅಸ್ತ್ರಗಳನ್ನು ಹೊಂದುವಲ್ಲಿ ನೆರವಾಗಲು ಉತ್ತರಕೊರಿಯದಂತಹ ರಾಷ್ಟ್ರದೊಂದಿಗೆ ಸಂಬಂಧ ಹೊಂದಿದ್ದ ಬಗ್ಗೆ ತಿಂಗಳೊಂದರ ಹಿಂದೆಯೇ ಅಮೆರಿಕದ ಹಿರಿಯ ಸಂಸದರು ಹಾಗೂ ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದರು ಎಂದು ವರದಿಯೊಂದು ತಿಳಿಸಿದೆ.
ಉತ್ತರ ಕೊರಿಯವು ಯಶಸ್ವಿ ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸುವುದಕ್ಕೆ ಮುಂಚೆಯೇ ಅಮೆರಿಕದ ಸಂಸದರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.
ಪಾಕಿಸ್ತಾನದೊಂದಿಗೆ ನಾಗರಿಕ ಪರಮಾಣು ಒಪ್ಪಂದ ಏರ್ಪಡಿಸುವ ಪ್ರಸ್ತಾಪವೊಂದು ಚರ್ಚೆಗೆ ಬಂದಿದ್ದ ವೇಳೆ ಅಮೆರಿಕದ ಸಂಸದರು ಅದನ್ನು ವಿರೋಧಿಸಿದ್ದರು.
ಉತ್ತರ ಕೊರಿಯ ಹಾಗೂ ಲಿಬಿಯದಂತಹ ರಾಷ್ಟ್ರಗಳಿಗೆ ಪಾಕಿಸ್ತಾನದ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಈ ಹಿಂದೆ ಸೂಕ್ಷ್ಮ ಪರಮಾಣು ತಂತ್ರಜ್ಞಾನಗಳನ್ನು ವಿನಿಮಯ ಮಾಡಿಕೊಂಡಿದ್ದರೆಂಬ ಕಾರಣಕ್ಕೆ ಪಾಕ್‌ನೊಂದಿಗೆ ಪ್ರಸ್ತಾಪಿತ ನಾಗರಿಕ ಅಣು ಒಪ್ಪಂದಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದರು.
ಪಾಕ್‌ನ ಅಣುವಿಜ್ಞಾನಿ ಎ.ಕ್ಯೂ.ಖಾನ್ ಕಾರ್ಯಜಾಲವು ಜಗತ್ತಿನ ಬಹುತೇಕ ಅಸ್ಥಿರ ರಾಷ್ಟ್ರಗಳಿಗೆ ಸೂಕ್ಷ್ಮ ಪರಮಾಣು ತಂತ್ರಜ್ಞಾನಗಳನ್ನು ಮಾರಾಟ ಮಾಡಿತ್ತೆಂದು ನಂಬಲಾಗಿದೆ.
ಹೆಚ್ಚಿನ ನಿರ್ಬಂಧಕ್ಕೆ ಅಮೆರಿಕ ಪರಿಶೀಲನೆ ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿರುವ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ ಉತ್ತರ ಕೊರಿಯದ ವಿರುದ್ಧ ಹೆಚ್ಚಿನ ನಿರ್ಬಂಧಗಳನ್ನು ವಿಧಿಸುವ ಬಗ್ಗೆ ಅಮೆರಿಕ ಪರಿಶೀಲನೆ ನಡೆಸಿದೆ. ತಾನು ನಡೆಸುತ್ತಿರುವ ಹೈಡ್ರೋಜನ್ ಬಾಂಬ್ ಪರೀಕ್ಷೆಯು ಅಮೆರಿಕದ ಉದ್ಧಟತನದ ವಿರುದ್ಧದ ಪ್ರತಿಕ್ರಿಯೆಯಾಗಿದೆ ಎಂದು ಉತ್ತರಕೊರಿಯ ನೀಡಿರುವ ಹೇಳಿಕೆಯನ್ನು ಅದು ಉಲ್ಲೇಖಿಸಿದೆ.