ಮೋದಿಗೆ ಕೈಕೊಟ್ಟ ವಾರಣಾಸಿ ಜಿಲ್ಲಾಪಂಚಾಯ್ತಿ
ಲಖನೌ: ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರ ವಾರಣಾಸಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಲಕ್ಷ್ಮೀಕಾಂತ ಬಾಜಪೇಯಿಯವರ ಮೀರಠ್ ಜಿಲ್ಲೆಗಳಲ್ಲಿ ನಡೆದ ಜಿಲ್ಲಾಪಂಚಾಯ್ತಿ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ.
ಮುಂದಿನ ವರ್ಷ ಚುನಾವಣೆ ನಡೆಯುವ ರಾಜ್ಯದಲ್ಲಿ ಬಿಜೆಪಿ ತನ್ನ ಬಲ ಕಳೆದುಕೊಳ್ಳುತ್ತಿರುವುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ.
ಉತ್ತರ ಪ್ರದೇಶದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಚುನಾವಣೆಯಲ್ಲಿ ಆಡಳಿತಾರೂಢ ಸಮಾಜವಾದಿ ಪಕ್ಷ ಅಭೂತಪೂರ್ವ ವಿಜಯ ಸಾಧಿಸಿದೆ.
ಗುರುವಾರ ನಡೆದ ಮತದಾನದಲ್ಲಿ 74 ಸ್ಥಾನಗಳ ಪೈಕಿ 60 ಸ್ಥಾನಗಳನ್ನು ಎಸ್ಪಿ ಬುಟ್ಟಿಗೆ ಹಾಕಿಕೊಂಡಿದೆ. ಅವಿರೋಧ ಆಯ್ಕೆಯಾದ 38 ಸ್ಥಾನಗಳ ಪೈಕಿ 36 ಸ್ಥಾನಗಳು ಎಸ್ಪಿ ತೆಕ್ಕೆಗೆ ಬಿದ್ದಿದ್ದರೆ, ಚುನಾವಣೆಯ ಬಳಿಕ ಮತ್ತೆ 24 ಸ್ಥಾನಗಳನ್ನು ಗೆದ್ದುಕೊಂಡಿದೆ.
ಬಿಜೆಪಿ ಪಶ್ಚಿಮ ಉತ್ತರಪ್ರದೇಶದ ಐದು ಕಡೆಗಳಲ್ಲಿ ಗೆಲುವು ಸಾಧಿಸುವ ಮೂಲಕ ತನ್ನ ಬಲವನ್ನು ಏಳಕ್ಕೇರಿಸಿಕೊಂಡಿದೆ. ಅದಾಗ್ಯೂ ಎಸ್ಪಿ ಕ್ಲೀನ್ ಸ್ವೀಪ್‌ಗೆ ಬಂಡಾಯ ಅಡ್ಡಿಯಾಗಿದ್ದು, ಬಿಜನೋರ್, ಸೀತಾಪುರ ಜಿಲ್ಲೆಗಳಲ್ಲಿ ಬಂಡಾಯ ಅಭ್ಯರ್ಥಿಗಳು ಅಧಿಕೃತ ಅಭ್ಯರ್ಥಿಗಳ ಎದುರು ಗೆಲುವು ಸಾಧಿಸಿದ್ದಾರೆ.





