ಪ್ರಜಾ ಪ್ರಭುತ್ವದ ವೌಲ್ಯಗಳನ್ನು ಉಳಿಸಿಕೊಳ್ಳುವುದು ಜನ ಸಾಮಾನ್ಯರ ಪತ್ರಿಕೆಯ ಹೊಣೆಗಾರಿಕೆ-ಡಾ.ಸಿ.ಎಸ್.ದ್ವಾರಕನಾಥ್

ಮಂಗಳೂರು ,ಜ.8:ಪ್ರಜಾ ಪ್ರಭುತ್ವದ ವೌಲ್ಯಗಳನ್ನು ಉಳಿಸಿಕೊಳ್ಳುವುದು ಜನ ಸಾಮಾನ್ಯರ ಪತ್ರಿಕೆಯ ಹೊಣೆಗಾರಿಕೆಯಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ತಿಳಿಸಿದ್ದಾರೆ.
ಅವರು ಇಂದು ನಗರದ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಪ್ರಸ್ತುತ ಪಾಕ್ಷಿಕದ 10ನೆ ವರ್ಷಾಚರಣೆಯ ಅಂಗವಾಗಿ ‘ಪ್ರಜಾ ಪ್ರಭುತ್ವ ಮತ್ತು ಮಾಧ್ಯಮ ’ವಿಚಾರ ಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳು ಜನಸಾಮಾನ್ಯರ ಧ್ವನಿಯನ್ನು ಬಿಂಬಿಸಲು ಅವಕಾಶ ನೀಡಬೇಕಾಗಿದೆ.ರಾಜ್ಯದಲ್ಲಿ ಲಂಕೇಶ್ ಪತ್ರಿಕೆಯ ಕಾಲದಲ್ಲಿ ಈ ರೀತಿಯ ಅಭಿವ್ಯಕ್ತಿಗೆ ಆ ಪತ್ರಿಕೆ ತನ್ನನ್ನು ತೆರೆದುಕೊಂಡಿತ್ತು.ಆದರೆ ಪ್ರಸಕ್ತ ಬದಲಾದ ವಾತವರಣದಲ್ಲಿ ಮಾಧ್ಯಗಳಲ್ಲಿ ತಳಸಮುದಾಯದ ಪ್ರಾತಿನಿಧ್ಯ ಕಡಿಮೆ ಇದೆ.ಪ್ರಚೋಧನಕಾರಿ ವರದಿಗಳು ಪ್ರಕಟವಾಗುತ್ತಿರುವುದನ್ನು ಕಂಡಾಗ ಮಾಧ್ಯಮಗಳು ಪ್ರಜಾಪ್ರಭುತ್ವದ ಕೈಯಲ್ಲಿವೆ ಎಂದು ಸಂದೇಹ ಪಡುವಂತಾಗಿದೆ.ಪತ್ರಿಕೆಗಳು ಉಳ್ಳವರ, ಮೇಲ್ವರ್ಗದ, ಮೇಲ್ಜಾತಿಯವರ ಉದ್ಯಮ ಶಾಹಿ ಶಕ್ತಿಗಳ ಹಿಡಿತದಲ್ಲಿದೆ.ಪರಿಣಾಮವಾಗಿ ಮಾಧ್ಯಮದಲ್ಲಿಯೂ ಸಹಜವಾಗಿ ತಳ ಸಮುದಾಯದ ಸಂಸ್ಕೃತಿ ಬೆಳೆಯಲು ಸಾಧ್ಯವಿಲ್ಲ.ಪ್ರಜಾಪ್ರಭುತ್ವದ ಅಂಗವಾದ ನ್ಯಾಯಾಲಯಕ್ಕೂ ಸತ್ಯ ಸಂಗತಿಯನ್ನು ತಿಳಿಸಲು ಮಾಧ್ಯಮಗಳ ವರದಿಗಳು ಹೇಗೆ ಸಹಾಯವಾಗುತ್ತವೆ ಎಂದು ದ್ವಾರಕನಾಥ್ ತಿಳಿಸಿದರು.
ಪ್ರಸಕ್ತ ಅಮಾಯಕರು ಬಂಧನಕ್ಕೊಳಗಾದಾಗ ಮೊದಲು ಅವರು ಮಾಧ್ಯಮದವರ ವಿಚಾರಣೆಗೆ ಒಳಗಾಗಬೇಕು ಈ ಸಂದರ್ಭದಲ್ಲಿ ಸಾಕಷ್ಟು ಅವಮಾನಕ್ಕೊಳಗಾಗುತ್ತಾರೆ. ಮಾಡದ ತಪ್ಪಿಗಾಗಿ ಅಪರಾಧಿಗಳಂತೆ ವಿಚಾರಣೆ ಎದುರಿಸಬೇಕಾಗುತ್ತಿರುವುದು ಅವರ ಕುಟುಂಬದ ಸದಸ್ಯರು ನೋವನ್ನು ಅನು ಭವಿಸುತ್ತಿರುವುದು ಮಾಧ್ಯಮಗಳ ಹೊಣೆಗಾರಿಯನ್ನು ಪ್ರಶ್ನೆಮಾಡುವಂತೆ ಮಾಡಿದೆ.ದೇಶದ ಸಂವಿಧಾನವನ್ನು ಮೊದಲು ಮಾಧ್ಯಮದವರು ಓದಿಕೊಂಡು ಅದನ್ನು ಅರ್ಥಮಾಡಿಕೊಂಡು,ಅದರ ಆಶಯದಂತೆ ಪ್ರಜಾಪ್ರಭುತ್ವದಲ್ಲಿ ಕಾರ್ಯನಿರ್ವಹಿಸಬೇಕಾಗಿದೆ.ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಈ ದೇಶದ ಸಂವಿಧಾನವನ್ನು ನಿರ್ಮಾಣ ಮಾಡಿದವರು ಮಾತ್ರ ಅಲ್ಲ ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ಥಾಪಕರು ಹೌದು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ.ಈ ನಿಟ್ಟಿನಲ್ಲಿ ಜನಸಾಮಾನ್ಯರ ಕೈಯಲ್ಲಿರುವ ಮಾಧ್ಯಮಗಳು ಇನ್ನಷ್ಟು ಸಶಕ್ತವಾಗಬೇಕು ಎಂದರು.
ಮಾಧ್ಯಮ-ಚಳವಳಿಗಳ ಮೇಲೆ ಉದ್ಯಮಶಾಹಿ ಶಕ್ತಿಗಳ ಹಿಡಿತ:- ದೇಶದಲ್ಲಿ ನ್ಯಾಯಪರತೆ,ಜಾತ್ಯತೀತ ವೌಲ್ಯಗಳನ್ನು ಕಾಪಡಲು ನ್ಯಾಯಾಂಗ ,ಚಳವಳಿ ಇದೆ ಎಂದು ಜನಸಾಮನ್ಯರ ನಂಬಿಕೆಯಾಗಿತ್ತು.ಆದರೆ ಇತ್ತೀಚಿನ ದಿನಗಳಲ್ಲಿ ಮಾಧ್ಯಮ -ಚಳವಳಿಗಳು ಉದ್ಯಮಶಾಹಿಗಳ ಹಿಡಿತಕ್ಕೆ ಒಳಗಾಗುತ್ತಿರುವುದು ,ಪಟ್ಟ ಭದ್ರರ ಕಪಿಮುಷ್ಟಿಯಲ್ಲಿ ನಲುಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಹಣಗಳಿಕೆಯೆ ಮುಖ್ಯವಾದಾಗ ಪ್ರಜಾಪ್ರಭುತ್ವ,ಜಾತ್ಯತೀತ ವೌಲ್ಯಗಳನ್ನು ಕಾಪಾಡುವವರು ಯಾರು.ಗೋಮಾಂಸದ ಹೆಸರಿನಲ್ಲಿ ಮುಸಲ್ಮಾನರನ್ನು ಮಾತ್ರ ಗುರಿಯಾಗಿಸಲಾಗಿದೆ.ಭಾರತದಲ್ಲಿ ಬ್ರಾಹ್ಮಣರು ಸೇರಿದಂತೆ ಗೋಮಾಂಸ ಭಕ್ಷಣೆ ಈ ನೆಲದ ಮೂಲ ನಿವಾಸಿಗಳ ಆಹಾರ ಪದ್ಧತಿಯಾಗಿತ್ತು ಎನ್ನುವ ಸತ್ಯವನ್ನು ಮರೆಮಾಚುತ್ತಿರುವುದು ವೈದಿಕಶಾಹಿಯ ತಂತ್ರ.ಈ ಸತ್ಯಗಳನ್ನು ಮಾಧ್ಯಮಗಳು ಬಹಿರಂಗ ಪಡಿಸಬೇಕಾಗಿದೆ.ಜನಪರ ಕಾಳಜಿ ಹೊಂದಿರುವ ,ನ್ಯಾಯಪರವಾಗಿರುವ ಮಾಧ್ಯಮಗಳು ಇನ್ನಷ್ಟು ಹುಟ್ಟಿ ಬರಲಿ.ಮಾಧ್ಯಮಗಳು ಮಾನವೀಯ ಸೂಕ್ಷ್ಮ ಸಂವೇದನೆಗಳನ್ನು ಕಳೆದುಕೊಳ್ಳಬಾರದು.ಪತ್ರಿಕೆಗಳು ಮತ್ತು ಚಳವಳಿಗಳು ಹೆಚ್ಚು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಬಂಜಗೆರೆ ತಿಳಿಸಿದರು.
ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡುತ್ತಾ,ಪತ್ರಿಕೆಗಳು ,ಮಾಧ್ಯಮಗಳು ವೌಢ್ಯವನ್ನು ಬಿತ್ತುವ ಕೆಲಸ ಮಾಡಬಾರದು.ಪ್ರಾಚೀನ ಘಟನೆಗಳು ವೌಢ್ಯದಿಂದ ಕೂಡಿದ್ದರೆ ಅದರ ವಿರುದ್ಧ ಪತ್ರಿಕೆಗಳು ಜಾಗೃತಿ ಮೂಡಿಸಬೇಕಾಗಿದೆ.ವೌಢ್ಯ ವಿರೋಧಿ ಕಾಯಿದೆ ಜಾರಿಯಾಗಲು ಬಲ ನೀಡಬೇಕಾಗಿದೆ.ರಾಜಕಾರಣಿಗಳ ತಪ್ಪುಗಳನ್ನು ಬಯಲಿಗೆಳೆಯಬೇಕಾಗಿದೆ.ಮಾಧ್ಯಮಗಳು ನ್ಯಾಯದ ಪರ ನಿಲ್ಲ ಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಎಂಪವರ್ ಇಂಡಿಯಾದ ಅಧ್ಯಕ್ಷ ಎ.ಎಂ.ಅಬ್ದುರ್ರಹ್ಮಾನ್ ಮಾತನಾಡುತ್ತಾ,ಪ್ರಜಾಪ್ರಭುತ್ವದ ಅಂಗವಾದ ಮಾಧ್ಯಮ ರಂಗ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವದ ನೆಲೆಯೂ ಕುಸಿಯುತ್ತಿದೆ. ಪ್ರಜಾಪ್ರಭುತ್ವದಲ್ಲಿ ಪ್ರಮಾಣಿಕವಾಗಿ ಕಾರ್ಯನಿರ್ವಹಿಸುವ ಸ್ವತಂತ್ರ ಮಾಧ್ಯಮ ಮಹತ್ವದ ಪಾತ್ರವಹಿಸುತ್ತದೆ.ಸರಕಾರದ ಆಳುವವರ ಬಂಡವಾಳಶಾಹಿಗಳ ,ಮೇಲ್ಜಾತಿಯವರ ಮಧ್ಯವರ್ತಿಗಳಾಗದೆ ,ತುಳಿತಕ್ಕೊಳಗಾದವರ,ಸಾಮಾಜಿಕ ನ್ಯಾಯದಿಂದ ವಂಚಿತರಾದವರ ಧ್ವನಿಯಾಗಬೇಕಾಗಿದೆ ಎಂದರು.
ದೇಶದಲ್ಲಿ ಎಲ್ಲರಿಗೂ ಆರೋಗ್ಯ ಭದ್ರತೆ,ಜೀವ ಭದ್ರತೆ ಇಲ್ಲದಿರುವಾಗ ಈ ದೇಶದಲ್ಲಿ ಪ್ರಜಾಪ್ರಭುತ್ವದ ಅಸ್ತಿತ್ವದ ಬಗ್ಗೆಯೇ ಸಂದೇಹ ಪಡುವಂತಾಗಿದೆ.ಪ್ರಸಕ್ತ ಪ್ರಜಾಪ್ರಭುತ್ವದಲ್ಲಿ ಮೂಲಭೂತವಾದಿಗಳು,ಜಾತಿವಾದಿಗಳು ,ಮಾರುಕಟ್ಟೆ ಶಕ್ತಿಗಳು ಬಲಗೊಳ್ಳುತ್ತಿರುವ ಸಂದರ್ಭದಲ್ಲಿ ಜನರಿಂದ ದೂರವಾಗುತ್ತಿರುವ ಪ್ರಜಾಪ್ರಭುತ್ವವನ್ನು ಜನರ ನಡುವೆ ಪುನರ್ ಸ್ಥಾಪಿಸಬೇಕಾಗಿದೆ ಎಂದು ಮೈಸೂರು ಸಮೂಹ ಸಂವಹನ ವಿಭಾಗದ ಮಾದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಮಹೇಶ್ ಚಂದ್ರ ಗುರು ತಿಳಿಸಿದ್ದಾರೆ.
ಮಹಿಳಾ ಹೋರಾಟಗಾರ್ತಿ ಶಾಹಿದಾ ತಸ್ನೀಂ ಮತನಾಡುತ್ತಾ ,ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ,ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ಹಲವಾರು ಪ್ರಕರಣಗಳಲ್ಲಿ ಅಪರಾಧಿಗಳು ಶಿಕ್ಷೆಯಿಂದ ಪಾರಾಗುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರವಹಿಸಬೇಕಾಗಿದೆ ಎಂದರು.ಇಲ್ಯಾಸ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.ಮುಹಮ್ಮದ್ ಕಕ್ಕಿಂಜೆ ಧನ್ಯವಾದ ಸಮರ್ಪಿಸಿದರು.
ಮಾರ್ಕಡೇಯ ಕಾಟ್ಜು ಸಂದೇಶ;-ಪ್ರಸ್ತುತ 10ನೆವರುಷದ ಕಾರ್ಯಕ್ರಮಕ್ಕೆ ವೈಯಕ್ತಿಕ ಕಾರಣಗಳಿಗಾಗಿ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎನ್ನಲು ವಿಷಾಧಿಸುತ್ತೇನೆ.ಭಾರತದ ಜಾತ್ಯತೀತ ವೌಲ್ಯ ನೆಲೆಗಳನ್ನು ಉಳಿಸಿಕೊಳ್ಳುವ ತಮ್ಮ ಪ್ರಯತ್ನ ಜಾರಿಯಲ್ಲಿರಲಿ ಎಂದು ಕಾರ್ಯಕ್ರಮದಲ್ಲಿ ಹಾಜರಾಗಲು ಸಾಧ್ಯವಾಗದಿರುವ ಬಗ್ಗೆ ನಿವೃತ್ತ ನ್ಯಾಯ ಮೂರ್ತಿ ಸುಪ್ರೀಂ ಕೋರ್ಟ್‌ನ ನಿಕಟ ಪೂರ್ವ ಅಧ್ಯಕ್ಷ ಮಾರ್ಕಂಡೇಯ ಕಾಟ್ಜು ಸಂದೇಶ ನೀಡಿರುವುದಾಗಿ ಸಂಘಟಕರು ಸಭೆಯಲ್ಲಿ ಸಂದೇಶ ವಾಚಿಸಿದರು.







