ಪಡಿತರ ಕಾಳಸಂತೆ ಮಾರಾಟ ತಡೆಗೆ ನಿಗಾ ಘಟಕ: ದಿನೇಶ್ ಗುಂಡೂರಾವ್

ಬೆಂಗಳೂರು, ಜ.8: ಪಡಿತರ ಆಹಾರ ಧಾನ್ಯಗಳು ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಗಟ್ಟುನ ನಿಟ್ಟಿನಲ್ಲಿ ನಿಗಾ ಘಟಕಗಳನ್ನು ಸ್ಥಾಪಿಸಲಾಗುವುದೆಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಶುಕ್ರವಾರ ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘ ನಗರದ ವೈಯಾಲಿಕಾವಲ್ ಆಟದ ಮೈದಾನದಲ್ಲಿ ಆಯೋಜಿಸಿದ್ದ ಸರಕಾರಿ ‘ಪಡಿತರ ವಿತರಕರ ಸಂಘದ 30ನೆ ವಾರ್ಷಿಕೋತ್ಸವ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಡಿತರ ಪದಾರ್ಥಗಳ ವಿತರಣೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪಡಿತರ ಆಹಾರ ಧಾನ್ಯಗಳನ್ನು ಸಾಗಿಸುವ ವಾಹನಗಳಿಗೆ ಜಿಪಿಎಸ್ ಯಂತ್ರವನ್ನು ಅಳವಡಿಸಲಾಗಿದ್ದು, ಆ ವಾಹನ ಪಡಿತರ ವಿತರಣಾ ಕೇಂದ್ರಗಳಿಗೆ ಸಾಗುವವರೆಗೂ ನಿಗಾ ವಹಿಸಲಾಗುವುದೆಂದು ಅವರು ತಿಳಿಸಿದರು.
ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಮೇಲೆ 20ಲಕ್ಷ ಕ್ಕೂ ಹೆಚ್ಚು ಪಡಿತರ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಹಾಗೂ 10 ಲಕ್ಷ ನಕಲಿ ಕಾರ್ಡ್‌ಗಳನ್ನು ರದ್ದು ಪಡಿಸಲಾಗಿದೆ. ಇದರ ಜೊತೆಗೆ ಆಧಾರ್ ಹಾಗೂ ಮತದಾನದ ಚೀಟಿಯನ್ನು ಪಡಿತರ ಕಾರ್ಡ್‌ಗೆ ಜೋಡಣೆ ಮಾಡುವ ಮೂಲಕ ಪಾರದರ್ಶಕತೆ ತರಲು ರಾಜ್ಯ ಸರಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.
ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆ ಯಶಸ್ವಿಯಾಗಬೇಕಾದರೆ ಪಡಿತರ ವಿತರಕರ ಪ್ರಾಮಾಣಿಕತೆ ಬಹಳ ಅಗತ್ಯವಿರುತ್ತದೆ. ಪಡಿತರ ವಿತರಣೆಯಿಂದ ಬದುಕು ಸಾಗಿಸಲು ಅಗತ್ಯವಾದ ಕಮಿಷನ್‌ನ್ನು ಸರಕಾರ ನೀಡುತ್ತಿದೆ. ಅಕ್ಕಿಗೆ ಕೊಡುತ್ತಿದ್ದ ಕಮಿಷನ್‌ನ್ನು 26 ರೂ.ನಿಂದ 36ಕ್ಕೆ ಏರಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿಸಲಾಗುವುದು. ಹೀಗಾಗಿ ಪಡಿತರ ವಿತರಕರು ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕೆಲಸ ಮಾಡಬೇಕೆಂದು ಅವರು ಕರೆ ನೀಡಿದರು.
ಪಡಿತರ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಮಾತನಾಡಿ, ಪಡಿತರ ವಿತರಣೆಯಲ್ಲಿ ಕರ್ನಾಟಕ ದೇಶಕ್ಕೆ ಮಾದರಿಯಾಗಿದೆ. ಇದರ ಯಶಸ್ಸಿಗೆ ಪಡಿತರ ವಿತರಕರ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯೆ ಕಾರಣವಾಗಿದೆ ಎಂದು ತಿಳಿಸಿದರು.
ಪಡಿತರ ವಿತರಣಾ ಕೇಂದ್ರಗಳಿಗೆ ಬರುವ ಸೀಮೆಎಣ್ಣೆ ಅಳತೆಯಲ್ಲಿ ವ್ಯತ್ಯಾಸ ಬರುತ್ತಿದೆ. ಇದರಿಂದ ಪಡಿತರ ಕಾರ್ಡ್‌ಗಳಿಗೆ ಸಮಾನವಾಗಿ ಹಂಚಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸೀಮೆಎಣ್ಣೆ ಟ್ಯಾಂಕ್‌ಗಳಿಗೆ ಜಿಪಿಎಸ್ ಯಂತ್ರವನ್ನು ಅಳವಡಿಸಬೇಕೆಂದು ದಿನೇಶ್‌ಗುಂಡೂರಾವ್‌ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಡಿತರ ವಿತರಕರ ಸಂಘದ ರಾಷ್ಟ್ರೀಯ ಅಧ್ಯಕ್ಷ ಕಾಕಾ ದೇಶ್‌ಮುಖ್, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎಸ್.ಎಂ.ಆನಂದ್, ಉಪಾಧ್ಯಕ್ಷ ಮೋಹನ್ ವಿ.ಅಸುಂಡಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಜಿ.ಕಲ್ಪನಾ, ವ್ಯವಸ್ಥಾಪಕ ನಿರ್ದೇಶಕಿ ರೋಹಿಣಿ ಸಿಂಧೂರಿ ಮತ್ತಿತರರಿದ್ದರು.





