ಕೆಪಿಎಸ್ಸಿಗೆ ಅಧ್ಯಕ್ಷರ ನೇಮಕಕ್ಕೆ ಸೋಮಶೇಖರ್ ಆಗ್ರಹ
ಬೆಂಗಳೂರು, ಜ.8: ರಾಜ್ಯ ಲೋಕಸೇವಾ ಆಯೋಗಕ್ಕೆ ದಕ್ಷ, ಪ್ರಾಮಾಣಿಕ ಹಾಗೂ ಅರ್ಹ ವ್ಯಕ್ತಿಯೊಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ಕೂಡಲೇ ನೇಮಕ ಮಾಡಬೇಕು ಎಂದು ಶಾಸಕ ಎಸ್.ಟಿ.ಸೋಮಶೇಖರ್ ಆಗ್ರಹಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಅವರು, ನಮ್ಮ ಸರಕಾರ ಅಧಿಕಾ ರಕ್ಕೆ ಬಂದಾಗಿನಿಂದಲೂ ಕೆಪಿಎಸ್ಸಿಯ ಅಧ್ಯಕ್ಷ ಸೇರಿದಂತೆ ಹಲವು ಸದಸ್ಯರ ಸ್ಥಾನಗಳು ಖಾಲಿ ಉಳಿದಿವೆ. ಇದರಿಂದಾಗಿ, ನಿರುದ್ಯೋಗಿ ಯುವಕ, ಯುವತಿಯರಿಗೆ ಸರಕಾರಿ ಉದ್ಯೋಗ ದೊರಕುವುದು ವಿಳಂಬವಾಗುತ್ತಿದೆ ಎಂದು ತಿಳಿಸಿದ್ದಾರೆ.
ಸರಕಾರಿ ನೇಮಕಾತಿಗಳನ್ನು ಸಮರ್ಪಕವಾಗಿ ಒದಗಿಸಿ ಕೊಡುವಂತಹ ಏಕೈಕ ಸಂಸ್ಥೆ ಕೆಪಿಎಸ್ಸಿ. ಇಂತಹ ಪ್ರತಿಷ್ಠಿತ ಸಂಸ್ಥೆ ನಾವಿಕನಿಲ್ಲದ ಹಡಗಿನಂತೆ ಆಗಿದ್ದು, ಆದಷ್ಟು ಶೀಘ್ರವೇ ಅಧ್ಯಕ್ಷರನ್ನು ನೇಮಕ ಮಾಡಬೇಕು. ಭ್ರಷ್ಟಾಚಾರ ಆರೋಪ ಮತ್ತು ವ್ಯಾಪಕ ಟೀಕೆಗಳು ಈ ಸಂಸ್ಥೆಯ ಮೇಲೆ ಕೇಳಿ ಬಂದಿವೆ. ಈ ಎಲ್ಲ ಆರೋಪಗಳನ್ನು ತೊಡೆದು ಹಾಕಲು ಪ್ರಾಮಾಣಿಕ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡಿ, ಕೆಪಿಎಸ್ಸಿಯ ಚಟುವಟಿಕೆಗಳು ಸುಸೂತ್ರವಾಗಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದರು.





