ಬಿಜೆಪಿ ಮುಖಂಡರಿಂದ ರಾಜಕೀಯ: ಉಗ್ರಪ್ಪ

ಬೆಂಗಳೂರು,ಜ.8: ನೂತನ ಲೋಕಾಯುಕ್ತರ ನೇಮಕ ವಿಚಾರ ಸಂಬಂಧ ಕ್ಷುಲ್ಲಕ ರಾಜಕಾರಣ ಮಾಡುತ್ತಿರುವ ವಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಹಾಗೂ ಸಾಮಾಜಿಕ ಪರಿವರ್ತನಾ ಸಮುದಾಯದ ಎಸ್.ಆರ್. ಹೀರೆಮಠ್ ಸಾರ್ವಜನಿಕ ಕ್ಷಮೆ ಕೋರಬೇಕೆಂದು ಮೇಲ್ಮನೆ ಸದಸ್ಯ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತ ಸ್ಥಾನಕ್ಕೆ ಯಾರ ಹೆಸರನ್ನು ಶಿಫಾರಸು ಮಾಡಬೇಕೆಂಬುದು ಸಿಎಂ ವಿವೇಚನೆಗೆ ಬಿಟ್ಟದ್ದು, ಅವರ ಅಧಿಕಾರವನ್ನು ಪ್ರಶ್ನಿಸುವುದು, ಇಂತಹ ವ್ಯಕ್ತಿಯನ್ನೇ ನಿಯೋಜಿಸಬೇಕೆಂದು ಒತ್ತಡ ಹೇರುವುದು ಸಲ್ಲ ಎಂದು ಆಕ್ಷೇಪಿಸಿದರು.
ರಾಜ್ಯ ಸರಕಾರದ ವಿರುದ್ಧ ಸಲ್ಲದ ಆರೋಪಗಳ ಮೂಲಕ ರಾಜಭವನ ಹಾಗೂ ಪ್ರಧಾನಿ ಕಚೇರಿಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡಿದ್ದಾಯಿತು. ಅದು ಫಲ ನೀಡದ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ತಮ್ಮ ರಾಜಕೀಯ ಉದ್ದೇಶಕ್ಕಾಗಿ ಬಿಜೆಪಿ ಬಳಸಿಕೊಳ್ಳಲು ಹೊರಟಿದೆ ಎಂದು ಉಗ್ರಪ್ಪ ಟೀಕಿಸಿದರು.
ಆರೋಪ ನಿರಾಧಾರ: ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ನ್ಯಾ.ಎಸ್.ಆರ್. ನಾಯಕ್ ವಿರುದ್ಧ ಭೂ ಖರೀದಿ, ನಿವೇಶನ ಪಡೆದಕ್ಕೆ ಸಂಬಂಧಿಸಿದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಕುಮುಟಾದಲ್ಲಿ ನಾಯಕ್‌ರ ಸಂಬಂಧಿ 4.20ಎಕ್ರೆ ಭೂಮಿ ಖರೀದಿಸಿದ್ದು, ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ನಗರದ ನ್ಯಾಯಾಂಗ ಬಡಾವಣೆಯಲ್ಲಿ ಎಲ್ಲರಂತೆಯೇ ನಾಯಕ್ ಅವರಿಗೂ ನಿವೇಶನ ಮಂಜೂರಾಗಿದೆ ಎಂದು ಹೇಳಿದರು.
ನ್ಯಾ.ನಾಯಕ್ ಅಕ್ರಮ ನಡೆಸಿದ್ದಾರೆಂಬ ಬಗ್ಗೆ ಬಿಜೆಪಿ ಹಾಗೂ ಹೀರೆಮಠ್ ಅವರಿಗೆ ತಿಳಿದಿದ್ದರೆ, ಅವರು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸುಮ್ಮನೆ ಇದ್ದದ್ದು ಏಕೆ ಎಂದು ಪ್ರಶ್ನಿಸಿದ ಉಗ್ರಪ್ಪ, ಲೋಕಾಯುಕ್ತ ಸ್ಥಾನಕ್ಕೆ ನಾಯಕ್, ಹೆಸರು ಪ್ರಸ್ತಾಪವಾದ ಹಿನ್ನೆಲೆಯಲ್ಲಿ ಸುಳ್ಳು ಆರೋಪ ಅಕ್ಷಮ್ಯ ಎಂದು ಖಂಡಿಸಿದರು.
ಭ್ರಷ್ಟಾಚಾರ ನಿಗ್ರಹಿಸುವ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದ್ಧರಾಮಯ್ಯ ಸೂಕ್ತ ವ್ಯಕ್ತಿಯನ್ನು ಲೋಕಾಯುಕ್ತ ಸ್ಥಾನಕ್ಕೆ ನಿಯೋಜಿಸುವ ಸಂಬಂಧ ರಾಜ್ಯಪಾಲರಿಗೆ ಹೆಸರನ್ನು ಶಿಫಾರಸು ಮಾಡಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ ಉಗ್ರಪ್ಪ, ಲೋಕಾಯುಕ್ತ ನೇಮಕ ವಿಚಾರದಲ್ಲಿ ರಾಜಕೀಯ ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.





