ಸಂಸದರ ನಿಧಿ ಬಳಕೆ; ಸಂಸದೀಯ ಸಮಿತಿ ಸಭೆ ಮುಂದೂಡಿಕೆ
ಬೆಂಗಳೂರು, ಜ.8: ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಅರವಿಂದ ಜಾಧವ್ ಅನುಪಸ್ಥಿತಿ ಹಿನ್ನೆಲೆಯಲ್ಲಿ ಸಂಸದರ ನಿಧಿ ಬಳಕೆಗೆ ಸಂಬಂಧಿಸಿದ ಸಂಸದೀಯ ಸಮಿತಿಯ ಸಭೆಯನ್ನು ಮುಂದೂಡಲಾಗಿದೆ.
ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಧ್ಯಾಹ್ನ 2:30ಕ್ಕೆ ಆಯೋಜಿಸಲಾಗಿದ್ದ ಸಂಸದೀಯ ಸಮಿತಿ ಸಭೆಯಲ್ಲಿ ಲೋಕಸಭೆಯ ಉಪಾಧ್ಯಕ್ಷ ಎಂ.ತಂಬಿದೊರೈ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ಕೆ.ಎಚ್.ಮುನಿಯಪ್ಪ, ಪ್ರಕಾಶ್ ಹುಕ್ಕೇರಿ ಸೇರಿದಂತೆ ಹಲವು ಸಂಸದರು ಪಾಲ್ಗೊಂಡಿದ್ದರು.
ಆದರೆ, ಮುಖ್ಯಕಾರ್ಯದರ್ಶಿ ನಿಗದಿತ ಸಮಯಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಯಿತು. ಸಂಸದರು ಸಭಾಂಗಣದಿಂದ ನಿರ್ಗಮಿಸುತ್ತಿದ್ದ ಸಂದರ್ಭದಲ್ಲಿ ಅವರಿಗೆ ಮುಖ್ಯಕಾರ್ಯದರ್ಶಿ ಎದುರಾಗಿ ತಮ್ಮ ವಿಳಂಬದ ಕುರಿತು ಸಮಜಾಯಿಷಿ ನೀಡಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ವಿಧಾನಸೌಧದಿಂದ ಎಲ್ಲ ಸಂಸದರು ಹತ್ತಿರದಲ್ಲಿನ ಖಾಸಗಿ ಹೋಟೆಲ್‌ನತ್ತ ತೆರಳಿದರು. ಅವರನ್ನು ಹಿಂಬಾಲಿಸಿದ ಮುಖ್ಯ ಕಾರ್ಯದರ್ಶಿ ಮತ್ತೆ ಮನವೊಲಿಕೆಗೆ ಯತ್ನಿಸಿದರೂ ಯಾವುದೆ ಪ್ರಯೋಜನವಾಗಲಿಲ್ಲ.
ಮುನಿಯಪ್ಪ ಆಕ್ರೋಶ: ಸಂಸದರ ನಿಧಿ ಬಳಕೆಗೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಸಂಸದೀಯ ಸಮಿತಿ ಸಭೆಗೆ ನಿಗದಿತ ಸಮಯಕ್ಕೆ ಹಾಜರಾಗದ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಅರವಿಂದ ಜಾಧವ್ ವಿರುದ್ಧ ಸಂಸದ ಕೆ.ಎಚ್.ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಕಾರ್ಯದರ್ಶಿಗೆ ಎಷ್ಟೇ ಕಾರ್ಯದ ಒತ್ತಡವಿದ್ದರೂ ಲೋಕಸಭೆಯ ಉಪಾಧ್ಯಕ್ಷರು ಪಾಲ್ಗೊಳ್ಳುತ್ತಿರುವ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಇಷ್ಟೊಂದು ದೊಡ್ಡ ಮಟ್ಟದ ಸಮಿತಿ ಸಭೆಗೆ ನಿಗದಿತ ಸಮಯಕ್ಕೆ ಆಗಮಿಸದೆ ಇದ್ದುದ್ದರಿಂದ ಸಭೆಯನ್ನೇ ಮುಂದೂಡಬೇಕಾಯಿತು ಎಂದು ಅಸಮಾಧಾನ ಹೊರಹಾಕಿದರು.
ಮುಖ್ಯಕಾರ್ಯದರ್ಶಿಯ ಈ ವರ್ತನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮಾಹಿತಿ ನೀಡಲಾಗು ವುದು ಎಂದ ಅವರು, ಲೋಕಸಭೆಯ ಉಪಾಧ್ಯಕ್ಷ ತಂಬಿದೊರೈ ಅವರನ್ನು ಸ್ಪೀಕರ್ ಅಥವಾ ಸಭಾಪತಿ ಸ್ವಾಗತಿಸಬೇಕಿತ್ತು. ಆದರೆ, ಈ ವಿಚಾರದಲ್ಲಿ ಶಿಷ್ಟಾಚಾರವನ್ನು ಉಲ್ಲಂಘಿಸಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.





