ಅಮೆರಿಕದಲ್ಲಿ 2015ರ ಡಿಸೆಂಬರ್ ಅತ್ಯಂತ ಬಿಸಿ
ಮಯಾಮಿ (ಅಮೆರಿಕ), ಜ. 8: ಆಧುನಿಕ ಕಾಲದಲ್ಲೇ ಅತ್ಯಂತ ಉಷ್ಣತೆಯ ಡಿಸೆಂಬರ್ ತಿಂಗಳನ್ನು ಅಮೆರಿಕ ಈ ಬಾರಿ ಕಂಡಿದೆ ಹಾಗೂ 2015ರ ವರ್ಷ ದಾಖಲಾಗಿರುವ ವರ್ಷಗಳಲ್ಲೇ ಎರಡನೆ ಅತ್ಯಂತ ಬಿಸಿಯ ವರ್ಷವಾಗಿದೆ ಎಂದು ಅಮೆರಿಕ ಸರಕಾರದ ವಿಜ್ಞಾನಿಗಳು ಗುರುವಾರ ಹೇಳಿದ್ದಾರೆ.
ರಾಷ್ಟ್ರೀಯ ಸಾಗರ ಮತ್ತು ಪರಿಸರ ನಿರ್ವಹಣೆಯ ವರದಿಯಲ್ಲಿ ಈ ವಿಷಯವನ್ನು ಹೇಳಲಾಗಿದೆ. ದಾಖಲಾತಿ ಆರಂಭಗೊಂಡ 1800ರ ದಶಕದ ಕೊನೆಯ ಬಳಿಕ 2015 ಅತ್ಯಂತ ಬಿಸಿಯ ವರ್ಷವಾಗಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ.
2015ರ ಜಾಗತಿಕ ಹವಾಮಾನ ಅಂಕಿಅಂಶ ಜನವರಿ 20ರಂದು ಬಿಡುಗಡೆಗೊಳ್ಳಲಿದೆ.
ಅಮೆರಿಕವೊಂದರಲ್ಲೇ 2015ರ ಡಿಸೆಂಬರ್ ದಾಖಲೆಯ ಉಷ್ಣತೆಯ ವರ್ಷವಾಗಿದೆ. ಈ ಅವಧಿಯಲ್ಲಿ 38.6 ಡಿಗ್ರಿ ಫ್ಯಾರನ್‌ಹೀಟ್ ದಾಖಲಾಗಿದ್ದು, 20ನೆ ಶತಮಾನದ ಸರಾಸರಿಗಿಂತ ಆರು ಡಿಗ್ರಿ ಹೆಚ್ಚಾಗಿದೆ ಎಂದು ಸಂಸ್ಥೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈ ಬಾರಿಯ ಉಷ್ಣತೆ 1939ರಲ್ಲಿ ದಾಖಲಾದ ಗರಿಷ್ಠ ಉಷ್ಣತೆಯನ್ನೂ ಹಿಂದಿಕ್ಕಿದೆ.
2015ರ ಡಿಸೆಂಬರ್ ಅತ್ಯಂತ ಚಳಿಯ ಹಾಗೂ ಅತ್ಯಂತ ಬಿಸಿಯ ತಿಂಗಳಾಗಿ 121 ವರ್ಷಗಳಲ್ಲೇ ಮೊದಲ ಬಾರಿಗೆ ದಾಖಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಈ ಅತಿರೇಕಗಳಿಗೆ ಕೊಂಚ ಮಟ್ಟಿಗೆ ಎಲ್ ನಿನೋ ಕಾರಣವಾಗಿರಬಹುದಾಗಿದೆ ಎಂದಿದೆ.