ಅಮೆರಿಕದ ಕ್ಷಿಪಣಿ ಕ್ಯೂಬದಲ್ಲಿ ಪತ್ತೆ
ವಾಶಿಂಗ್ಟನ್, ಜ. 8: ಅಮೆರಿಕದ ಸುಪರ್ದಿಯಿಂದ ಕಾಣೆಯಾಗಿದ್ದ ‘ಹೆಲ್‌ಫಯರ್’ ಕ್ಷಿಪಣಿಯೊಂದು ನಿಗೂಢವಾಗಿ ಕ್ಯೂಬದಲ್ಲಿ ಪತ್ತೆಯಾಗಿದೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ಗುರುವಾರ ವರದಿ ಮಾಡಿದೆ.
ಈ ಕ್ಷಿಪಣಿಯ ನಾಪತ್ತೆಯು ಅಮೆರಿಕದಲ್ಲಿ ಕಳವಳಕ್ಕೆ ಕಾರಣವಾಗಿತ್ತು. ಕ್ಷಿಪಣಿಯ ತಂತ್ರಜ್ಞಾನವು ಚೀನಾ, ರಶ್ಯ ಅಥವಾ ಉತ್ತರ ಕೊರಿಯದ ವಶವಾಗಿರಬಹುದು ಎಂಬ ಭೀತಿಯನ್ನು ಅಮೆರಿಕ ಹೊಂದಿತ್ತು.
ಯುರೋಪ್‌ನಿಂದ ಅಮೆರಿಕಕ್ಕೆ ಕ್ಷಿಪಣಿಯನ್ನು ಸಾಗಿಸುತ್ತಿದ್ದಾಗ ಅದು ನಿಗೂಢವಾಗಿ ನಾಪತ್ತೆಯಾಗಿತ್ತು. ಕ್ಷಿಪಣಿ ಕ್ಯೂಬದಲ್ಲಿ ಪತ್ತೆಯಾಗಿರುವುದರ ಹಿಂದೆ ಪಿತೂರಿಯಿದೆಯೇ ಅಥವಾ ಮಾನವ ತಪ್ಪುಗಳು ಇದಕ್ಕೆ ಕಾರಣವೇ ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.
ಆದಾಗ್ಯೂ, ಕ್ಷಿಪಣಿ ಸಿಡಿತಲೆಯನ್ನು ಹೊಂದಿರಲಿಲ್ಲ.
ಕಳೆದ ವರ್ಷ ಕ್ಯೂಬದೊಂದಿಗಿನ ಸಂಬಂಧದಲ್ಲಿ ಐತಿಹಾಸಿಕ ಸುಧಾರಣೆಯಾಗಿದ್ದರೂ, ಕ್ಷಿಪಣಿಯನ್ನು ಮರಳಿ ತರುವ ಅಮೆರಿಕದ ಪ್ರಯತ್ನ ಈವರೆಗೆ ಫಲಿಸಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.
ಕ್ಯೂಬ ಹೆಲ್‌ಫಯರ್ ಕ್ಷಿಪಣಿಯನ್ನು ಬಿಚ್ಚಿ ಪರಿಶೀಲನೆ ನಡೆಸುವುದು ಎಂಬ ಆತಂಕವನ್ನು ಅಮೆರಿಕ ಹೊಂದಿಲ್ಲ ಎಂದಿರುವ ಪತ್ರಿಕೆ, ಆದಾಗ್ಯೂ, ಅದು ಈ ತಂತ್ರಜ್ಞಾನವನ್ನು ಅಮೆರಿಕದ ಎದುರಾಳಿಗಳಾದ ಚೀನಾ, ರಶ್ಯ ಮತ್ತು ಉತ್ತರ ಕೊರಿಯಗಳೊಂದಿಗೆ ಹಂಚಿಕೊಳ್ಳುವುದು ಎಂಬ ಆತಂಕವನ್ನು ಹೊಂದಿದೆ ಎಂದು ಅದು ಹೇಳಿದೆ.