ಮಿಲಿಟರಿ ಶಿಕ್ಷಣ ಎಲ್ಲರಿಗೂ ಕಡ್ಡಾಯಗೊಳಿಸಿ
ಮಾನ್ಯರೆ,
ನಮ್ಮ ದೇಶದ ಸೈನಿಕರು ಹೋರಾಟದಲ್ಲಿ ಹುತಾತ್ಮರಾದ ಸಂದರ್ಭದಲ್ಲಿ ಅವರ ಪಾರ್ಥೀವ ಶರೀರದ ಮುಂದೆ ನಿಂತು ಘೋಷಣೆಗಳನ್ನು ಕೂಗುವ ಜನರನ್ನು ಕಂಡಾಗ ನಮ್ಮಲ್ಲಿ ದೇಶಾಭಿಮಾನಕ್ಕೆ ಎಂದಿಗೂ ಕೊರತೆಯಿಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ.
ಆದರೆ ಕೆಲವೊಂದು ಮಂದಿ ಕೇವಲ ಘೋಷಣೆಗಳನ್ನು ಕೂಗುವುದಕ್ಕಷ್ಟೇ ಸೀಮಿತರಾಗುತ್ತಿದ್ದಾರೆ. ಮತ್ತೆ ಕೆಲವರು ವಾಹಿನಿಗಳಲ್ಲಿ ಕೂತು ದೇಶಪ್ರೇಮದ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ. ನಮ್ಮ ದೇಶದಲ್ಲಿ ಸೈನ್ಯಕ್ಕೆ ಸೇರುವವರು ನಗರ ಪ್ರದೇಶದ ಜನರಿಗಿಂತ ಗ್ರಾಮೀಣ ಪ್ರದೇಶದವರೇ ಹೆಚ್ಚಾಗಿರುತ್ತಾರೆ. ನಮ್ಮ ದೇಶದ ರಕ್ಷಣೆಗಾಗಿ ಶ್ರಮಿಸುವುದು ಅಥವಾ ಪ್ರಾಣವನ್ನು ಅರ್ಪಿಸುವುದು ಕೇವಲ ಕೆಲವೇ ಜನರ ಕರ್ತವ್ಯವೆಂಬ ಭಾವನೆಯಿದೆ. ಬಹುತೇಕ ಪೋಷಕರಿಗೆ ತಮ್ಮ ಮಕ್ಕಳು ಸೈನ್ಯಕ್ಕೆ ಸೇರುವುದಕ್ಕಿಂತ ಉನ್ನತ ವ್ಯಾಸಾಂಗವನ್ನು ಪಡೆದು ವಿದೇಶದಲ್ಲಿ ನೆಲೆಸಿ ಸಂತೋಷದ ಜೀವನವನ್ನು ನಡೆಸುವುದೇ ಪ್ರಮುಖ ಆದ್ಯತೆಯಾಗಿರುತ್ತದೆ. ದೇಶಕ್ಕಾಗಿ ಬೆವರು ಸುರಿಸಲಿಚ್ಛಿಸದ, ಸಾಮಾಜಿಕ ಕಳಕಳಿಯಿಲ್ಲದ ಜನ ಸಾಕಷ್ಟು ಮಂದಿ ಇದ್ದಾರೆ.
ಅನೇಕ ಪಾಶ್ಚಿಮಾತ್ಯ ದೇಶಗಳಲ್ಲಿ ಹದಿನಾರು ವರ್ಷ ತುಂಬಿದಂತಹ ಪ್ರತಿಯೊಬ್ಬ ಯುವಕ-ಯುವತಿಯರು ಕಡ್ಡಾಯವಾಗಿ ಮಿಲಿಟರಿ ಶಿಕ್ಷಣವನ್ನು ಪಡೆಯಲೇ ಬೇಕು. ಆನಂತರ ಅವರು ತಮಗಿಷ್ಟ ಬಂದ ಕಡೆಗಡ ವ್ಯಾಸಂಗವನ್ನು ಮುಂದುವರಿಸಬಹುದು. ಆದರೆ ನಮ್ಮ ದೇಶದಲ್ಲಿ ಈ ಬಗ್ಗೆ ಕಾಳಜಿ ಇಲ್ಲ.
ಈ ಹಿನ್ನಲೆಯಲ್ಲಿ ಕೇಂದ್ರ ಸರಕಾರ ನಮ್ಮಲ್ಲೂ ಪ್ರತಿಯೊಬ್ಬ ಯುವಕ-ಯುವತಿಯರಿಗೆ ಕನಿಷ್ಟ 1 ವರ್ಷದ ಮಿಲಿಟರಿ ಶಿಕ್ಷಣವನ್ನು ಕಡ್ಡಾಯ ಮಾಡುವಂತೆ ಕಾನೂನು ರೂಪಿಸಬೇಕು. ದೇಶದ ರಕ್ಷಣೆ ಮತ್ತು ದೇಶದ ಸೇವೆ ಪ್ರತಿಯೊಂದು ಕುಟುಂಬದ ಕರ್ತವ್ಯವಾಗಿದೆ.





