ಜಯಲಲಿತಾ ಖುಲಾ ಫೆ.2ರಿಂದ ಮೇಲ್ಮನವಿಗಳ ಅಂತಿಮ ವಿಚಾರಣೆ
ಜಯಲಲಿತಾ ಖುಲಾ
ಫೆ.2ರಿಂದ ಮೇಲ್ಮನವಿಗಳ ಅಂತಿಮ ವಿಚಾರಣೆ
ಹೊಸದಿಲ್ಲಿ, ಜ.8: ಅನಧಿಕೃತ ಸಂಪತ್ತು ಪ್ರಕರಣದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ಮತ್ತಿತರರನ್ನು ಖುಲಾಸೆಗೊಳಿಸಿರುವ ವಿರುದ್ಧ ದಾಖಲಿಸಲಾಗಿರುವ ಮೇಲ್ಮನವಿಗಳ ಅಂತಿಮ ವಿಚಾರಣೆಯನ್ನು ಫೆ.2ರಂದು ಆರಂಭಿಸಲು ಸುಪ್ರೀಂಕೋರ್ಟ್ ಶುಕ್ರವಾರ ನಿರ್ಧರಿಸಿದೆ.
ವಿಚಾರಣೆ ಫೆ.2ರಂದು ಆರಂಭಗೊಳ್ಳಲಿದ್ದು, 3 ಹಾಗೂ 4 ರಂದು ಮುಂದುವರಿಯಲಿದೆಯೆಂದು ನ್ಯಾಯಮೂರ್ತಿಗಳಾದ ಪಿನಾಕಿ ಚಂದ್ರ ಘೋಷ್‌ಹಾಗೂ ಅಮಿತಾಬ್ ರಾಯ್‌ಯವರನ್ನೊಳಗೊಂಡ ಪೀಠವೊಂದು ತಿಳಿಸಿದೆ.
ವಿಚಾರಣೆಯನ್ನು ಫೆ.2ರಿಂದ ನಡೆಸುವಂತೆ ಕರ್ನಾಟಕ ಸರಕಾರದ ಸಲಹೆಗಾರ ಹಾಗೂ ಹಿರಿಯ ವಕೀಲ ದುಶ್ಶಂತ್ ದವೆ ನ್ಯಾಯಪೀಠಕ್ಕೆ ಸಲಹೆ ನೀಡಿದ್ದರು.
ಅಂತಿಮ ವಾದ-ಪ್ರತಿವಾದಕ್ಕೆ ದಿನಾಂಕ ನಿಗದಿ ಹಾಗೂ ಮೇಲ್ಮನವಿಗಳಲ್ಲಿ ವಾದ ಮಂಡಿಸಬೇಕಾದ ವಿಷಯಗಳನ್ನು ಗುರುತಿಸಲು ಚರ್ಚೆ ನಡೆಸುವುದಕ್ಕಾಗಿ ನ್ಯಾಯಾಲಯ ಇಂದು ವಿಚಾರಣೆಯನ್ನು ನಿಗದಿ ಪಡಿಸಿತ್ತು.
ಯಾವ ವಿಷಯಗಳ ಬಗ್ಗೆ ಗಮನ ನೀಡಬೇಕೆಂದು ನಿರ್ಧರಿಸಲು ವಿಚಾರಣೆಯನ್ನು ವಿಳಂಬಿಸಬೇಕಾದ ಅಗತ್ಯವನ್ನು ತಳ್ಳಿ ಹಾಕಿದ ದವೆ, ದಿನಾಂಕ ನಿರ್ಧಾರಕ್ಕೆ ವಿಷಯಗಳು ನಿರ್ಣಾಯಕವಾಗಲಾರದೆಂದು ವಾದಿಸಿದರು.
ಫೆಬ್ರವರಿಯಲ್ಲಿ ವಿಚಾರಣಾ ದಿನಾಂಕಗಳಂದು ಪ್ರಕರಣವನ್ನು ಆರಂಭಕ್ಕೆ ಪಟ್ಟಿ ಮಾಡಲು ನ್ಯಾ.ಘೋಷ್ ಒಪ್ಪಿಕೊಂಡರು. ತಿಂಗಳಲ್ಲಿ ಪಟ್ಟಿಯಾಗಿರುವ ಪ್ರಕರಣಗಳ ತುರ್ತನ್ನು ಹೊಂದಿಕೊಂಡು ಮುಂದಿನ ವಿಚಾರಣೆಯನ್ನು ಮುಂದುವರಿಸಲಾಗುವುದೆಂದು ಪೀಠ ಹೇಳಿತು.





