ಜಲ್ಲಿಕಟ್ಟು: ಕೇಂದ್ರದ ನಿರ್ಧಾರಕ್ಕೆ ಪೆಟಾ ತರಾಟೆ
ಹೊಸದಿಲ್ಲಿ, ಜ.8: ಗೂಳಿಗಳನ್ನು ಪಳಗಿಸುವ ಜನಪ್ರಿಯ ಕ್ರೀಡೆ ಜಲ್ಲಿಕಟ್ಟು ಮತ್ತು ಇತರ ಗೂಳಿ ಸ್ಪರ್ಧೆಗಳಿಗೆ ಅವಕಾಶ ಕಲ್ಪಿಸುವ ಕೇಂದ್ರದ ನಿರ್ಧಾರವನ್ನು ಶುಕ್ರವಾರ ತೀವ್ರ ತರಾಟೆಗೆತ್ತಿಕೊಂಡಿರುವ ಪ್ರಾಣಿಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪೀಪಲ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಎನಿಮಲ್ಸ್(ಪೆಟಾ) ಸಂಸ್ಥೆಯು, ಕ್ರೌರ್ಯದ ವಿರುದ್ಧದ ರಕ್ಷಣೆಯನ್ನು ಹಿಂದೆಗೆದುಕೊಂಡಿರುವುದು ರಾಷ್ಟ್ರಕ್ಕೆ ಕಪ್ಪುಚುಕ್ಕೆಯಾಗಿದೆ ಎಂದು ಹೇಳಿದೆ. ಗೂಳಿಗಳ ರಕ್ಷಣೆಗಾಗಿ ತಾನು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲುಗಳನ್ನೇರುವುದಾಗಿ ಅದು ಹೇಳಿದೆ.
ಜಲ್ಲಿಕಟ್ಟು ಮತ್ತು ಅಂತಹುದೇ ಇತರ ಕ್ರೀಡೆಗಳನ್ನು ಈ ದೇಶದ ಅತ್ಯುನ್ನತ ನ್ಯಾಯಾಲಯವೇ ನಿಷೇಧಿಸಿದ್ದರೂ ಜಾನುವಾರುಗಳ ಬಗ್ಗೆ ಕಾಳಜಿ ವಹಿಸುವುದಾಗಿ ಹೇಳಿಕೊಂಡಿದ್ದ ಅಧಿಕಾರಿಗಳೇ ಈಗ ಕ್ರೌರ್ಯಕ್ಕೆ ಅವಕಾಶ ಕಲ್ಪಿಸುತ್ತಿರುವುದು ಬಿಜೆಪಿಯ ಬೆಂಬಲಿಗರಿಗೆ ಆಘಾತವನ್ನುಂಟು ಮಾಡಿದೆ ಎಂದು ಪೆಟಾ ಪ್ರತಿಪಾದಿಸಿದೆ. ಈ ಬಗ್ಗೆ ಇಂದು ಬೆಳಿಗ್ಗೆಯಿಂದ ನಮಗೆ ಬಿಜೆಪಿ ಬೆಂಬಲಿಗರು ಮತ್ತು ಇತರ ಪ್ರಾಣಿಪ್ರೇಮಿಗಳಿಂದ ಒಂದೇ ಸಮನೆ ದೂರವಾಣಿ ಕರೆಗಳು ಬರುತ್ತಿವೆ ಎಂದು ಅದು ಹೇಳಿತು.
ಕ್ರೀಡೆಗಳು ಮತ್ತು ಸ್ಪರ್ಧೆಗಳಲ್ಲಿ ಗೂಳಿಗಳ ಬಳಕೆಯನ್ನು ಪರಿಸರ ಸಚಿವಾಲಯವೇ 2011ರಲ್ಲಿ ನಿಷೇಧಿಸಿತ್ತು. ಪ್ರಾಣಿಗಳಿಗೆ ಕ್ರೌರ್ಯ ತಡೆ ಕಾಯ್ದೆಯಡಿ 1960ರಿಂದಲೇ ಜಲ್ಲಿಕಟ್ಟು ಮತ್ತು ಇತರ ಸ್ಪರ್ಧೆಗಳಲ್ಲಿ ಗೂಳಿಗಳಿಗೆ ಹಿಂಸೆಯನ್ನುಂಟು ಮಾಡುವುದು ಕಾನೂನು ಬಾಹಿರವಾಗಿದೆ ಎಂದು ಪೆಟಾ ಇಂಡಿಯಾದ ಸಿಇಒಪೂರ್ವಾ ಜೋಷಿಪುರ ಅವರು ಹೇಳಿದರು.
ಸರಕಾರವು ತನ್ನ ಹಿಂದಿನ ನಿರ್ಧಾರದಿಂದ ವಿಮುಖವಾಗಿರುವುದು ಬೆಜೆಪಿಯ ಬೆಂಬಲಿಗರಿಗೇ ಆಘಾತವನ್ನುಂಟು ಮಾಡಿದೆ ಎಂದರು.





