ರಾಯಭಾರ ಕಚೇರಿ ಮೇಲೆ ಸೌದಿ ದಾಳಿ: ಇರಾನ್ ಆರೋಪ; ಉದ್ವಿಗ್ನತೆ ಮತ್ತೆ ತಾರಕಕ್ಕೆ
ಟೆಹರಾನ್, ಜ. 8: ಯಮನ್‌ನಲ್ಲಿರುವ ತನ್ನ ರಾಯಭಾರ ಕಚೇರಿಯ ಮೇಲೆ ಸೌದಿ ಅರೇಬಿಯದ ಯುದ್ಧ ವಿಮಾನಗಳು ಬಾಂಬ್ ದಾಳಿ ನಡೆಸಿವೆ ಎಂಬುದಾಗಿ ಇರಾನ್ ಗುರುವಾರ ಆರೋಪಿಸಿದ್ದು, ಉಭಯ ದೇಶಗಳ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ತಾರಕಕ್ಕೇರಿದೆ. ಈ ದಾಳಿಯ ವಿರುದ್ಧ ತಾನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ದೂರು ನೀಡುವುದಾಗಿ ಅದು ಹೇಳಿದೆ.
ಯಮನ್‌ನಲ್ಲಿ ಇರಾನ್ ಬೆಂಬಲಿತ ಶಿಯಾ ಬಂಡುಕೋರರ ವಿರುದ್ಧ ಯುದ್ಧ ನಡೆಸುತ್ತಿರುವ ಸೌದಿ ಅರೇಬಿಯ ನೇತೃತ್ವದ ಮೈತ್ರಿಕೂಟ ಇರಾನ್‌ನ ಆರೋಪವನ್ನು ನಿರಾಕರಿಸಿದೆ. ಇರಾನ್ ರಾಯಭಾರ ಕಚೇರಿಯ ಸಮೀಪ ಯಾವುದೇ ದಾಳಿ ನಡೆಸಿಲ್ಲ ಎಂದು ಅದು ಹೇಳಿದೆ.
ಅದೇ ವೇಳೆ, ಸುನ್ನಿ ಪ್ರಾಬಲ್ಯದ ಸೌದಿ ಅರೇಬಿಯದಿಂದ ಮಾಡಿಕೊಳ್ಳಲಾಗುವ ಯಾವುದೇ ಆಮದಿನ ಮೇಲೆ ಶಿಯಾ ಪ್ರಾಬಲ್ಯದ ಇರಾನ್ ನಿಷೇಧ ವಿಧಿಸಿದೆ.
ಇತ್ತೀಚೆಗೆ ಸೌದಿ ಅರೇಬಿಯದಲ್ಲಿ ಪ್ರಮುಖ ಶಿಯಾ ಧಾರ್ಮಿಕ ಮುಖಂಡರೊಬ್ಬರಿಗೆ ಮರಣ ದಂಡನೆ ಜಾರಿಗೊಳಿಸಿರುವುದನ್ನು ವಿರೋಧಿಸಿ ಇರಾನ್‌ನಲ್ಲಿ ಪ್ರತಿಭಟನಕಾರರು ಸೌದಿ ಅರೇಬಿಯ ರಾಯಭಾರ ಕಚೇರಿಗೆ ಬೆಂಕಿ ಹಚ್ಚಿದ್ದರು. ಈ ಘಟನೆಯಿಂದ ಆಕ್ರೋಶಗೊಂಡ ಸೌದಿ ಅರೇಬಿಯ ಇರಾನ್‌ನೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿತ್ತು. ಯಮನ್‌ನ ಬಂಡುಕೋರರ ನಿಯಂತ್ರಣದಲ್ಲಿರುವ ರಾಜಧಾನಿ ಸನಾದ ಮೇಲೆ ನಡೆಸಲಾದ ಬಾಂಬ್ ದಾಳಿಯಲ್ಲಿ ತನ್ನ ರಾಯಭಾರ ಕಚೇರಿಯ ಹಲವಾರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ಹೇಳಿದೆ.
‘‘ಇದು ಸೌದಿ ಅರೇಬಿಯ ಉದ್ದೇಶಪೂರ್ವಕವಾಗಿ ನಡೆಸಿದ ಕೃತ್ಯವಾಗಿದ್ದು, ದೂತಾವಾಸಗಳಿಗೆ ರಕ್ಷಣೆ ನೀಡುವ ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗಿದೆ’’ ಎಂದು ವಿದೇಶ ಸಚಿವಾಲಯದ ವಕ್ತಾರ ಹುಸೈನ್ ಜಬ್ಬರ್ ಅನ್ಸಾರಿ ಹೇಳಿರುವುದಾಗಿ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.
‘‘ಈ ವಿಷಯದಲ್ಲಿ ತನ್ನ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವ ಹಕ್ಕನ್ನು ಇರಾನ್ ಕಾದಿರಿಸಿಕೊಂಡಿದೆ’’ ಎಂದು ಅದು ಹೇಳಿದೆ.
ಬಳಿಕ, ಹೇಳಿಕೆಯೊಂದನ್ನು ನೀಡಿದ ಇರಾನ್‌ನ ಉಪ ವಿದೇಶ ಸಚಿವ ಹುಸೈನ್ ಅಮೀರ್ ಅಬ್ದುಲ್ಲಾ, ‘‘ಸನಾದ ಮೇಲೆ ಸೌದಿ ಅರೇಬಿಯ ವಾಯು ದಾಳಿ ನಡೆಸಿದ ವೇಳೆ ಒಂದು ರಾಕೆಟ್ ನಮ್ಮ ರಾಯಭಾರ ಕಚೇರಿಯ ಬಳಿ ಬಿದ್ದಿದೆ ಹಾಗೂ ದುರದೃಷ್ಟವಶಾತ್, ನಮ್ಮ ಓರ್ವ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ’’ ಎಂದು ತಿಳಿಸಿದರು.