36 ಕೋ.ರೂ.ಸಾಲ ಹಗರಣ 11 ಮಾಜಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ದೋಷಾರೋಪಣ ಪಟ್ಟಿ
ನಾಗಪುರ,ಜ.8: ನಿಯಮಬಾಹಿರವಾಗಿ ಸಾಲಗಳನ್ನು ಮಂಜೂರು ಮಾಡುವ ಮೂಲಕ ರಾಷ್ಟ್ರೀಕೃತ ಯುಕೋ ಬ್ಯಾಂಕಿಗೆ 36 ಕೋ.ರೂ. ನಷ್ಟವನ್ನುಂಟು ಮಾಡಿದ್ದಕ್ಕಾಗಿ ಬ್ಯಾಂಕಿನ 11 ಮಾಜಿ ಅಧಿಕಾರಿಗಳು ಮತ್ತು ನಾಗಪುರದ ಕಂಪೆನಿಯೊಂದರ ಇಬ್ಬರು ನಿರ್ದೇಶಕರು ಸೇರಿದಂತೆ 14 ಜನರ ವಿರುದ್ಧ ಸಿಬಿಐ ಗುರುವಾರ ಇಲ್ಲಿಯ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದೆ.
ಆಹಾರ ವಸ್ತುಗಳನ್ನು ತಯಾರಿಸುವ ಮಾವೆನ್ ಇಂಡಸ್ಟ್ರೀಸ್ ಲಿ.ನ ಇಬ್ಬರು ನಿರ್ದೇಶಕರಾದ ಅಶೋಕ್ ಕುಮಾರ್ ರಥಿ ಮತ್ತು ಕಿಶೋರ್ ಕುಮಾರ್ ರಥಿ ಸಾಲಗಳನ್ನು ಮಂಜೂರು ಮಾಡಿಸಿಕೊಳ್ಳುವಲ್ಲಿ ಯುಕೋ ಬ್ಯಾಂಕ್ ಅಧಿಕಾರಿಗಳೊಂದಿಗೆ ಶಾಮೀಲಾಗಿದ್ದರು ಎಂದು ಸಿಬಿಐ ಆರೋಪಿಸಿದೆ. ಬ್ಯಾಂಕಿನ ಇಬ್ಬರು ಮಾಜಿ ಕಾರ್ಯಕಾರಿ ನಿರ್ದೇಶಕರಾದ ಬಿಜಯ್ ಕುಮಾರ್ ದತ್ತಾ ಮತ್ತು ವೀರೇಂದ್ರ ಕುಮಾರ್ ದತ್ತಾ ಹಾಗೂ ಆಗಿನ ಮಹಾ ಪ್ರಬಂಧಕರು,ಉಪ ಮಹಾಪ್ರಬಂಧಕರು ಮತ್ತು ಸಹಾಯಕ ಮಹಾ ಪ್ರಬಂಧಕರು ಆರೋಪಿಗಳಲ್ಲಿ ಸೇರಿದ್ದಾರೆ.
ಸಿಬಿಐ ಕಳೆದ ವರ್ಷದ ಮಾ.31ರಂದು ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿತ್ತು.





