ಬಂದೂಕು ನೀತಿ ಸುಧಾರಣೆ ವಿರೋಧಿಗಳಿಗೆ ಮತ ಹಾಕಲಾರೆ: ಬರಾಕ್ ಒಬಾಮ
ವಾಶಿಂಗ್ಟನ್, ಜ. 8: ಕಠಿಣ ಬಂದೂಕು ಕಾನೂನುಗಳಿಗೆ ಬೆಂಬಲ ನೀಡದ ಯಾವುದೇ ಅಭ್ಯರ್ಥಿಯ ಪರವಾಗಿ ತಾನು ಪ್ರಚಾರ ನಡೆಸುವುದಿಲ್ಲ ಹಾಗೂ ಮತ ಹಾಕುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಗುರುವಾರ ಹೇಳಿದ್ದಾರೆ.
ಅಗತ್ಯ ಬಿದ್ದರೆ, ಈ ವಿಷಯದಲ್ಲಿ ತನ್ನದೇ ಡೆಮಾಕ್ರಟಿಕ್ ಪಕ್ಷದ ಸದಸ್ಯರ ವಿರುದ್ಧವೇ ಮತ ಚಲಾಯಿಸುವುದಾಗಿ ಲೇಖನವೊಂದರಲ್ಲಿ ಅವರು ಎಚ್ಚರಿಸಿದ್ದಾರೆ.
‘‘ಅಧ್ಯಕ್ಷನಾಗಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ನಾನು ತೆಗೆದುಕೊಳ್ಳುತ್ತೇನೆ ಹಾಗೂ ಅದೇ ವೇಳೆ, ಓರ್ವ ನಾಗರಿಕನಾಗಿಯೂ ನನ್ನಿಂದ ಆಗುವ ಎಲ್ಲವನ್ನೂ ಮಾಡುತ್ತೇನೆ’’ ಎಂದು ‘ನ್ಯೂಯಾರ್ಕ್ ಟೈಮ್ಸ್’ನ ಅಭಿಪ್ರಾಯ ಅಂಕಣದಲ್ಲಿ ಪ್ರಕಟಗೊಂಡ ಲೇಖನದಲ್ಲಿ ಅವರು ಹೇಳಿದ್ದಾರೆ.
‘‘ವಿವೇಚಾನಾಯುಕ್ತ ಬಂದೂಕು ನೀತಿ ಸುಧಾರಣೆ ಕಾನೂನಿಗೆ ಬೆಂಬಲ ನೀಡದ ಯಾವುದೇ ಅಭ್ಯರ್ಥಿಯ ಪರವಾಗಿ ನಾನು ಪ್ರಚಾರ ಮಾಡುವುದಿಲ್ಲ ಹಾಗೂ ಮತ ಹಾಕುವುದಿಲ್ಲ. ಅವರು ನನ್ನ ಪಕ್ಷದವರೇ ಆಗಿರಬಹುದು’’ ಎಂದರು.
ಹಾಗಾದರೆ, ಒಬಾಮ ಪ್ರಚಾರ ನಡೆಸದವರ ಪಟ್ಟಿಯಲ್ಲಿ ಡೆಮಾಕ್ರಟಿಕ್ ಸೆನೆಟರ್ ನಾರ್ತ್ ಡಕೋಟದ ಹೈಡಿ ಹೈಟ್‌ಕ್ಯಾಂಪ್ ಸೇರುವ ಸಾಧ್ಯತೆಯಿದೆ. ಅವರು 2013ರಲ್ಲಿ ರೂಪಿಸಲಾದ ಬಂದೂಕು ನೀತಿ ಸುಧಾರಣೆಗೆ ವಿರುದ್ಧವಾಗಿ ಮತ ಹಾಕಿದ್ದರು.
ಬಳಿಕ ಟಿವಿ ಚಾನೆಲ್ ಸಿಎನ್‌ಎನ್‌ನಲ್ಲಿ ಕಾಣಿಸಿಕೊಂಡ ಒಬಾಮ, ತನ್ನ ಟೀಕಾಕಾರರಿಗೆ ತಿರುಗೇಟು ನೀಡಿದರು. ತನ್ನ ಟೀಕಾಕಾರರು ಬಂದೂಕು ನೀತಿ ಕುರಿತ ತನ್ನ ನಿಲುವನ್ನು ತಿರುಚಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.