ಪಠಾಣ್‌ಕೋಟ್ ಭಯೋತ್ಪಾದಕ ದಾಳಿ: ತನಿಖೆಗೆ ಶರೀಫ್ ಆದೇಶ

♦ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ
♦ ಭಾರತ ಒದಗಿಸಿರುವ ಪುರಾವೆಗಳ ಆಧಾರದಲ್ಲಿ ತನಿಖೆ ನಡೆಸಲು ಸೂಚನೆ
♦ ಉಭಯ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆ ನಡೆಯುವ ಸಾಧ್ಯತೆ ಉಜ್ವಲ
ಇಸ್ಲಾಮಾಬಾದ್, ಜ.8: ಪಠಾಣ್‌ಕೋಟ್ ವಾಯುಪಡೆ ನೆಲೆಯ ಮೇಲೆ ನಡೆದ ದಾಳಿ ಘಟನೆಗೆ ಸಂಬಂಧಿಸಿ, ಭಾರತ ಸರಕಾರವು ಒದಗಿಸಿದ ಮಾಹಿತಿಗಳ ಆಧಾರದಲ್ಲಿ ತನಿಖೆಯನ್ನು ನಡೆಸಲು ಪಾಕ್ ಪ್ರಧಾನಿ ನವಾಝ್ ಶರೀಫ್ ಆದೇಶಿಸಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ಗುರುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅವರು ಭಾರತೀಯ ವಾಯುನೆಲೆಯ ಮೇಲೆ ಉಗ್ರರು ನಡೆಸಿದ ದಾಳಿಯ ಬಗ್ಗೆ ವಿಸ್ತೃತವಾದ ಚರ್ಚೆ ನಡೆಸಿದ ಬಳಿಕ ತನಿಖೆಗೆ ಆದೇಶ ನೀಡಿದರು. ಭಾರತವು ಒದಗಿಸಿರುವ ಪುರಾವೆಗಳ ಬಗ್ಗೆ ತನಿಖೆಯನ್ನು ನಡೆಸಲು ಪ್ರಧಾನಿ ಶರೀಫ್ ಹಾಗೂ ಅವರ ಸಹಾಯಕ ಅಧಿಕಾರಿಗಳು ಸಮ್ಮತಿಸಿದರೆಂದು ಪಾಕಿಸ್ತಾನದ ‘ದಿ ನೇಷನ್’ ಪತ್ರಿಕೆ ವರದಿ ಮಾಡಿದೆ.
ಪಠಾಣ್‌ಕೋಟ್ ದಾಳಿಗೆ ಸಂಬಂಧಿಸಿ ಭಾರತವು ಒದಗಿಸಿದ ಪುರಾವೆಗಳನ್ನು, ಮುಂದಿನ ಕ್ರಮಕ್ಕಾಗಿ ಗುಪ್ತಚರ ಇಲಾಖೆಯ ವರಿಷ್ಠ ಅಫ್ತಾಬ್ ಹುಸೈನ್‌ರಿಗೆ ಹಸ್ತಾಂತರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶರೀಫ್ ಸಭೆಯಲ್ಲಿ ಮಾತನಾಡಿ, ಭಯೋತ್ಪಾದನೆಯನ್ನು ಸದೆಬಡಿಯುವ ತನ್ನ ಪ್ರಯತ್ನದ ಭಾಗವಾಗಿ ಪಾಕಿಸ್ತಾನವು ನೆರೆಯ ರಾಷ್ಟ್ರವಾದ ಭಾರತದ ಜೊತೆ ಸಹಕಾರಕ್ಕೆ ಉತ್ತೇಜನ ನೀಡಲು ಸಿದ್ಧವಿದೆಯೆಂದು ಹೇಳಿದರು. ಪಠಾಣ್‌ಕೋಟ್ ದಾಳಿ ಘಟನೆಯ ಬಳಿಕ,ಅನಿಶ್ಚಿತತೆಗೆ ಸಿಲುಕಿರುವ ಉಭಯ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆಯು ಸುಗಮವಾಗಿ ನಡೆಯುವಂತೆ ಮಾಡಲು, ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೊತೆ ಸಂಪರ್ಕದಲ್ಲಿರುವಂತೆ ಅವರು ಪಾಕ್ ಭದ್ರತಾ ಸಲಹೆಗಾರ ನಾಸೀರ್ ಖಾನ್‌ಗೆ ಸಭೆಯಲ್ಲಿ ಸೂಚನೆ ನೀಡಿದ್ದಾರೆಂದು ವರದಿ ತಿಳಿಸಿದೆ.
ಭಾರತ ನೀಡಿದ ಮಾಹಿತಿ ಸಮರ್ಪಕವಾಗಿಲ್ಲ: ಪಾಕ್ ಅಧಿಕಾರಿ
ಆದರೆ, ಪಠಾಣ್‌ಕೋಟ್ ದಾಳಿಯ ಬಗ್ಗೆ ಭಾರತವು ಒದಗಿಸಿರುವ ಮಾಹಿತಿಯು ಸಮರ್ಪಕವಾಗಿಲ್ಲವೆಂದು ಪಾಕಿಸ್ತಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರ ತದ ಮಾಹಿತಿಯು ಕೆಲವು ದೂರವಾಣಿ ಸಂಖ್ಯೆಗಳಿಗಷ್ಟೇ ಸೀಮಿತ ವಾಗಿದ್ದು, ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡುವಂತೆ ಪಾಕಿಸ್ತಾನವು ಕೋರುವ ಸಾಧ್ಯತೆಯಿದೆಯೆಂದು ಅವರು ಹೇಳಿದ್ದಾರೆ.