ಶತ್ರು ಆಸ್ತಿ ಕಾಯ್ದೆ ತಿದ್ದುಪಡಿ ಅಧ್ಯಾದೇಶಕ್ಕೆ ರಾಷ್ಟ್ರಪತಿ ಅಂಕಿತ
ಹೊಸದಿಲ್ಲಿ,ಜ.8: 47 ವರ್ಷಗಳಷ್ಟು ಹಳೆಯದಾದ ಶತ್ರು ಆಸ್ತಿ ಕಾಯ್ದೆಗೆ ತಿದ್ದುಪಡಿ ತರುವ ಅಧ್ಯಾದೇಶಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಗುರುವಾರ ಅಂಕಿತವನ್ನು ಹಾಕಿದ್ದಾರೆ. ಇದು ಇಂತಹ ಆಸ್ತಿಗಳು ಶತ್ರುವು ನಿಧನನಾಗಿದ್ದರೂ ಅಭಿರಕ್ಷಕರ ವಶದಲ್ಲಿಯೇ ಮುಂದುವರಿಯಲು ಅವಕಾಶವನ್ನು ಕಲ್ಪಿಸುತ್ತದೆ.
ದೇಶದಲ್ಲಿಯ ಶತ್ರು ಆಸ್ತಿಗಳ ಅಭಿರಕ್ಷಕನಾಗಿ ಭಾರತದಲ್ಲಿರುವ,ಪಾಕಿಸ್ತಾನಿ ಪ್ರಜೆಗಳಿಗೆ ಸೇರಿದ ಆಸ್ತಿಗಳ ಸೂಕ್ತ ವಿನಿಯೋಗಕ್ಕಾಗಿ ಅಧಿಕಾರ ಹೊಂದಿರುವ ಭಾರತ ಸರಕಾರದ ಇಲಾಖೆಯು ಕಾರ್ಯ ನಿರ್ವಹಿಸುತ್ತದೆ.
1965ರ ಭಾರತ-ಪಾಕಿಸ್ತಾನ ಯುದ್ಧದ ನಂತರ 1968ರಲ್ಲಿ ಶತ್ರು ಆಸ್ತಿ ಕಾಯ್ದೆಯು ಅಸ್ತಿತ್ವಕ್ಕೆ ಬಂದಿತ್ತು.
ಶತ್ರು ಆಸ್ತಿ ಕಾಯ್ದೆ,1968 ಮತ್ತು ಸಾರ್ವಜನಿಕ ಆವರಣಗಳ(ಅನಧಿಕೃತ ನಿವಾಸಿಗಳ ತೆರವು)ಕಾಯ್ದೆ,1971ಕ್ಕೆ ತಿದ್ದುಪಡಿಯನ್ನು ತರಲು ಅವಕಾಶ ಕಲ್ಪಿಸುವ ಶತ್ರು ಆಸ್ತಿ(ತಿದ್ದುಪಡಿ ಮತ್ತು ದೃಢೀಕರಣ) ಅಧ್ಯಾದೇಶ,2016ಕ್ಕೆ ರಾಷ್ಟ್ರಪತಿಯವರು ಗುರುವಾರ ಅಂಕಿತವನ್ನು ಹಾಕಿದ್ದಾರೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿದವು.
ಹಿಂದಿನ ಯುಪಿಎ ಸರಕಾರದ ಹೆಜ್ಜೆಗಳಲ್ಲಿಯೇ ಸಾಗುತ್ತಿರುವ ನರೇಂದ್ರ ಮೋದಿ ಸರಕಾರವು ಶತ್ರು ಆಸ್ತಿ ಕಾಯ್ದೆಗೆ ತಿದ್ದುಪಡಿ ತರಲು ತೀವ್ರ ಆಸಕ್ತಿ ಹೊಂದಿದೆ.
ಯುಪಿಎ ಸರಕಾರವು ಈ ಅಧ್ಯಾದೇಶವನ್ನು ಹೊರಡಿಸಿದ್ದಾಗ ಸಂಸತ್ತಿನಲ್ಲಿ ಮಂಡಿಸಲಾಗಿದ್ದ ಮಸೂದೆಯು ಸರಕಾರದೊಳಗಿನ ಭಿನ್ನಾಭಿಪ್ರಾಯಗಳು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಅಂಗೀಕಾರಗೊಂಡಿರಲಿಲ್ಲ.





