ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ: ಜ.12ರಿಂದ ಜಾರಿ, ಉಲ್ಲಂಘಿಸಿದರೆ 100 ರೂ.ದಂಡ

ಬೆಂಗಳೂರು, ಜ. 8: ರಾಜ್ಯದಲ್ಲಿ ದ್ವಿಚಕ್ರ ವಾಹನದ ಹಿಂಬದಿಯ ಸವಾರರಿಗೂ ಇದೇ ತಿಂಗಳ 12ರಿಂದ ಹೆಲ್ಮೆಟ್ (ಶಿರಸ್ತ್ರಾಣ) ಕಡ್ಡಾಯಗೊಳಿಸಿದ್ದು, ನಿಯಮ ಉಲ್ಲಂಘಿಸಿದರೆ 100 ರೂ.ದಂಡ ವಿಧಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರು, ಮಕ್ಕಳು ಸೇರಿದಂತೆ ದ್ವಿಚಕ್ರ ವಾಹನದ ಸಹ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇಲ್ಲವಾದರೆ ಸಂಚಾರ ಪೊಲೀಸರು ದಂಡ ವಿಧಿಸಲಿದ್ದಾರೆ ಎಂದರು.
ಸುಪ್ರೀಂ ಕೋರ್ಟಿನ ರಸ್ತೆ ಸುರಕ್ಷತಾ ಸಮಿತಿಯ ಶಿಫಾರಸಿನ ಅನ್ವಯ ದ್ವಿಚಕ್ರವಾಹನ ಹಿಂಬದಿಯ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿದ್ದು, ಎಲ್ಲ ರಾಜ್ಯಗಳಿಗೂ ಇದು ಅನ್ವಯ ಆಗಲಿದೆ ಎಂದ ಅವರು, ಹೊಸದಿಲ್ಲಿ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಸೇರಿ ಹಲವು ರಾಜ್ಯಗಳಲ್ಲಿ ಹಿಂಬದಿಯ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ 1.13 ಕೋಟಿ ದ್ವಿಚಕ್ರ ವಾಹನ ಸವಾರರಿದ್ದು, ಬೆಂಗಳೂರು ನಗರದಲ್ಲಿ 41 ಲಕ್ಷ ದಿಚಕ್ರ ವಾಹನಗಳಿವೆ. ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಹಿಂಬದಿಯ ಸವಾರರೇ ಸಾವನ್ನಪ್ಪುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹ ಕ್ರಮ ಎಂದು ಸಚಿವರು ಹೇಳಿದರು.







