ಹೂಡಿಕೆದಾರರಿಗೆ 45 ಸಾವಿರ ಕೋಟಿ ರೂ. ವಂಚನೆ: ಪರ್ಲ್ಸ್ ಗ್ರೂಪ್ ವರಿಷ್ಠನ ಬಂಧನ
ಹೊಸದಿಲ್ಲಿ, ಜ.8: 5.5 ಕೋಟಿಗೂ ಅಧಿಕ ಹೂಡಿಕೆದಾರರು ವಂಚನೆಗೊಳಗಾದ 45 ಸಾವಿರ ಕೋಟಿ ರೂ.ಗಳ ಬೃಹತ್ ಗೋಲ್‌ಮಾಲ್ ಹಗರಣಕ್ಕೆ ಸಂಬಂಧಿಸಿ, ಪರ್ಲ್ಸ್ ಗ್ರೂಪ್‌ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ನಿರ್ಮಲ್ ಸಿಂಗ್ ಭಾಂಗೂ ಹಾಗೂ ಇತರ ಮೂವರು ಉನ್ನತ ಅಧಿಕಾರಿಗಳನ್ನು ಸಿಬಿಐ ಶುಕ್ರವಾರ ಬಂಧಿಸಿದೆ.
ಪರ್ಲ್ಸ್ ಗ್ರೂಫ್ ಆಫ್ ಫೈನಾನ್ಸ್ (ಪಿಜಿಎಫ್ಢ್) ಲಿಮಿಟೆಡ್‌ನ ಸಿಎಂಡಿ ಭಾಂಗೂ ಜೊತೆ, ಪಿಎಸಿಎಲ್‌ನ ಪ್ರವರ್ತಕ ಹಾಗೂ ಆಡಳಿತ ನಿರ್ದೇಶಕ ಸುಖದೇವ್ ಸಿಂಗ್, ಕಾರ್ಯನಿರ್ವಹಣಾ ನಿರ್ದೇಶಕ (ವಿತ್ತ) ಗುರ್ಮಿತ್ ಸಿಂಗ್ ಮತ್ತು ಕಾರ್ಯಕಾರಿ ನಿರ್ದೇಶಕ ಸುಬ್ರತಾ ಭಟ್ಟಾಚಾರ್ಯ ಅವರನ್ನು ಪಿಜಿಎಫ್/ಪಿಎಸಿಎಲ್ , ಸ್ಕೀಮ್ ವಂಚನೆ ಹಗರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆಯೆಂದು ಸಿಬಿಐನ ಪತ್ರಿಕಾ ಮಾಹಿತಿ ಅಧಿಕಾರಿ ಆರ್.ಕೆ.ಗೌರ್ ತಿಳಿಸಿದ್ದಾರೆ. ಹೊಸದಿಲ್ಲಿಯಲ್ಲಿಯ ಸಿಬಿಐ ಮುಖ್ಯ ಕಾರ್ಯಾಲಯದಲ್ಲಿ ನಾಲ್ವರೂ ಆರೋಪಿಗಳನ್ನು ವಿಸ್ತೃತವಾಗಿ ಪ್ರಶ್ನಿಸಿದ ಬಳಿಕ ಅವರನ್ನು ಬಂಧಿಸಲಾಯಿತೆಂದು ಅವರು ಹೇಳಿದ್ದಾರೆ. ವಿಚಾರಣೆಯ ವೇಳೆ, ಆರೋಪಿಗಳು ಅಸಮಂಜಸವಾದ ಹೇಳಿಕೆಗಳನ್ನು ನೀಡತೊಡಗಿದರು ಹಾಗೂ ಅಧಿಕಾರಿಗಳ ಜೊತೆ ಸಹಕರಿಸದಿದ್ದುದರಿಂದ ಅವರನ್ನು ಬಂಧಿಸಲಾಯಿತೆಂದು ಸಿಬಿಐ ಮೂಲಗಳು ತಿಳಿಸಿವೆ
ಪಿಜಿಎಫ್/ಪಿಎಸಿಎಲ್ ಹೂಡಿಕೆ ಸ್ಕೀಮ್‌ನಡಿ, ಪಿಜಿಎಫ್ ಗ್ರೂಪ್, ದೇಶಾದ್ಯಂತ 5.5 ಕೋಟಿ ಹೂಡಿಕೆದಾರರಿಂದ 45 ಸಾವಿರ ಕೋಟಿ ರೂ. ಸಂಗ್ರಹಿಸಿತ್ತು. ದೊಡ್ಡ ಮೊತ್ತದ ಲಾಭವನ್ನು ನೀಡುವ ಆಮಿಷದೊಂದಿಗೆ, ಸಂಸ್ಥೆಯು ಹೂಡಿಕೆದಾರರಿಗೆ ವಂಚಿಸಿದೆಯೆಂಬು ಸಿಬಿಐ ಆರೋಪಿಸಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 120ಬಿ (ಕ್ರಿಮಿನಲ್ ಸಂಚು) ಹಾಗೂ 420 (ವಂಚನೆ) ಅನ್ವಯ ಪ್ರಕರಣಗಳನ್ನು ದಾಖಲಿಸಲಾಗಿದೆಯೆಂದು ಗೌರ್ ತಿಳಿಸಿದ್ದಾರೆ.