ಜಲ್ಲಿಕಟ್ಟು: ಕೇಂದ್ರದ ಹಸಿರು ನಿಶಾನೆ

ಹೊಸದಿಲ್ಲಿ, ಜ.8: ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಡೆಸಲು ಕೇಂದ್ರ ಸರಕಾರವು ಶುಕ್ರವಾರ ಅವಕಾಶ ಕಲ್ಪಿಸಿದೆ. ಗೂಳಿಗಳನ್ನು ಬಳಸಲ್ಪಡುವ ಈ ಕ್ರೀಡೆಯನ್ನು ಪ್ರದರ್ಶಿಸದಂತೆ ಪರಿಸರ ಸಚಿವಾಲಯ 2011ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ಅದು ರದ್ದುಗೊಳಿಸಿದೆ.
ಪ್ರದರ್ಶನಗಳಿಗೆ ಬಳಸಬಾರದ ಪ್ರಾಣಿಗಳ ವರ್ಗದಲ್ಲಿ ಗೂಳಿಗಳನ್ನು ಸೇರಿಸುವಂತೆ ಅಥವಾ ಜಲ್ಲಿಕಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರಾಣಿಗಳಿಗೆ ತರಬೇತಿ ನೀಡದಂತೆ ಪರಿಸರ ಮತ್ತು ಅರಣ್ಯ ಸಚಿವಾಲಯ 2011ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು 2014ರ ಮೇಯಲ್ಲಿ ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು.
ಪರಿಸರ ಮತ್ತು ಅರಣ್ಯ ಸಚಿವಾಲಯದ ಈಗಿನ ಅಧಿಸೂಚನೆಯಿಂದ ಜಲ್ಲಿಕಟ್ಟು ಭಾರತದ ಇತರ ಭಾಗಗಳಲ್ಲಿ ನಡೆಯುವ ಗೂಳಿ ಸಂಬಂಧಿತ ಇತರ ಕೆಲವು ಪಾರಂಪರಿಕ ಕಾರ್ಯಕ್ರಮಗಳನ್ನು ಹೊರತು ಪಡಿಸಲಾಗಿದೆ.
ಪಾರಂಪರಿಕ ಕಾರ್ಯಕ್ರಮಕ್ಕೆ ಅನುಮತಿ ನೀಡಲು ಕ್ರಮ ಕೈಗೊಳ್ಳುವಂತೆ ವಿನಂತಿಸಿ ಸಿಎಂ ಜೆ.ಜಯಲಲಿತಾ, ಪ್ರಧಾನಿ ಮೋದಿಯವರಿಗೆ ಬರೆದಿದ್ದ ಪತ್ರ ಸಹಿತ ತಮಿಳುನಾಡಿನ ರಾಜಕೀಯ ಅಭಿಪ್ರಾಯದ ಒತ್ತಡದ ಹಿನ್ನೆಲೆಯಲ್ಲಿ ಈ ಅನುಮತಿ ಲಭ್ಯವಾಗಿದೆ. ಜಲ್ಲಿಕಟ್ಟು ಪ್ರಾಣಿಹಿಂಸೆಯ ಕ್ರೀಡೆಯೆಂಬ ವಿರೋಧ ಧ್ವನಿಗಳ ಎದುರು ಪಾರಂಪರಿಕ ಪದ್ಧತಿಗಳಿಗೆ ಬೆಂಬಲ ನೀಡುವ ಬದ್ಧತೆಯೆಂದು ಕೇಂದ್ರದ ಈ ಕ್ರಮವನ್ನು ವ್ಯಾಖ್ಯಾನಿಸಲಾಗಿದೆ. ಈ ರೀತಿ ಬಿಜೆಪಿಯ ರಾಜಕೀಯ ಉಪಸ್ಥಿತಿಯಿಲ್ಲದ ರಾಜ್ಯವೊಂದಕ್ಕೆ ಇದೊಂದು ರಾಜಕೀಯ ಕೊಡುಗೆಯೆಂದೂ ಪರಿಗಣಿಸಲಾಗಿದೆ.







