ನಾಲ್ಕು ದಿನಗಳ ಶೋಕಾಚರಣೆಯ ನಂತರವೇ ಮೆಹಬೂಬ ಪ್ರಮಾಣ ವಚನ ಸ್ವೀಕಾರ:ಪಿಡಿಪಿ

ಶ್ರೀನಗರ,ಜ.8: ತನ್ನ ತಂದೆಯ ನಿಧನದ ನಾಲ್ಕು ದಿನಗಳ ಶೋಕಾಚರಣೆ ಮುಗಿಯುವ ಮುನ್ನ ಪ್ರಮಾಣ ವಚನವನ್ನು ಸ್ವೀಕರಿಸಲು ಪಿಡಿಪಿಯ ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿ ಮೆಹಬೂಬ ಮುಫ್ತಿ ಅವರು ಸಿದ್ಧರಿಲ್ಲ. ಹೀಗಾಗಿ ಜಮ್ಮ್ಮು-ಕಾಶ್ಮೀರವು ಕೆಲದಿನಗಳ ಮಟ್ಟಿಗೆ ರಾಷ್ಟ್ರಪತಿ ಆಳ್ವಿಕೆಗೆ ಒಳಗಾಗಬಹುದು ಎಂದು ಪಿಡಿಪಿಯ ಹಿರಿಯ ನಾಯಕ ಮುಝಫ್ಫರ್ ಹುಸೇನ್ ಬೇಗ್ ಅವರು ಶುಕ್ರವಾರ ಇಲ್ಲಿ ತಿಳಿಸಿದರು. ಮೆಹಬೂಬ ಅವರ ಉತ್ತರಾಧಿಕಾರಿಯಾಗಿ ಪಿಡಿಪಿಯ ಅಧ್ಯಕ್ಷರಾಗಿ ಬೇಗ್ ನೇಮಕಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರ ನಿಧನದಿಂದಾಗಿ ರಾಜ್ಯದಲ್ಲಿ ಈಗ ತಾಂತ್ರಿಕವಾಗಿ ಸರಕಾರವೇ ಇಲ್ಲದಂತಾಗಿದೆ.
ಕೊನೆಯ ಕ್ಷಣದ ಅಡಚಣೆಗಳನ್ನು ಹೊರತುಪಡಿಸಿದರೆ 56ರ ಹರೆಯದ ಮೆಹಬೂಬ ಮುಖ್ಯಮಂತ್ರಿ ಗದ್ದುಗೆಯನ್ನೇರಲು ರಂಗ ಸಜ್ಜುಗೊಂಡಿದೆ. ತಕ್ಷಣವೇ ಪ್ರಮಾಣ ವಚನವನ್ನು ಸ್ವೀಕರಿಸುವಂತೆ ಮೆಹಬೂಬರ ಮೇಲೆ ಒತ್ತಡ ಹೇರಲು ಪಕ್ಷವು ಸಿದ್ಧವಿಲ್ಲ ಎಂದ ಬೇಗ್,ಅವರು ತಾಯಿ,ಪುತ್ರಿ ಮತ್ತು ಸೋದರಿಯೂ ಆಗಿದ್ದಾರೆ. ತಂದೆಯ ನಿಧನ ಅವರ ಪಾಲಿಗೆ ದೊಡ್ಡ ದುರಂತವಾಗಿದೆ ಎಂದು ಹೇಳಿದರು. ಸಮ್ಮಿಶ್ರ ಕೂಟದ ಪಾಲುದಾರನಾಗಿರುವ ಬಿಜೆಪಿಯು ಮೆಹಬೂಬ ಅವರಿಗೆ ಬೆಂಬಲವನ್ನು ಸೂಚಿಸಿದೆ ಎಂದು ಅವರು ತಿಳಿಸಿದರು.