ನ್ಯಾಯಾಂಗದಲ್ಲೂ ‘ಕನ್ನಡ ಭಾಷೆ’ ಅನುಷ್ಠಾನ ಆಗಲಿ: ಸಿದ್ದರಾಮಯ್ಯ

ಬೆಂಗಳೂರು, ಜ.8: ಆಡಳಿತದ ಎಲ್ಲ ಹಂತಗಳಲ್ಲಿಯೂ ಕನ್ನಡ ಭಾಷೆಗೆ ಆದ್ಯತೆ ನೀಡಿದ್ದು, ನ್ಯಾಯಾಂಗದಲ್ಲಿಯೂ ಕನ್ನಡ ಭಾಷೆಯಲ್ಲೇ ವಾದ-ತೀರ್ಪು ನೀಡುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಎಲ್ಲ ಕಡೆಗಳಲ್ಲಿ ‘ಆಂಗ್ಲ’ ಪ್ರವೃತ್ತಿ ಹೆಚ್ಚುತ್ತಿರುವುದು ಆರೋಗ್ಯಕರ ಬೆಳವಣಿಗೆಯಲ್ಲ ಎಂದು ಆಕ್ಷೇಪಿಸಿದರು.
ಭಾಷೆಯೇ ಜ್ಞಾನವಲ್ಲ: ಯಾವುದೇ ಒಂದು ಭಾಷೆ ಯಾವುದೇ ಕಾರಣಕ್ಕೂ ‘ಜ್ಞಾನ’ ಆಗಲು ಸಾಧ್ಯವಿಲ್ಲ. ಆದರೆ, ‘ಜ್ಞಾನ ಸಂಪಾದನೆ’ಗೆ ಭಾಷೆ ಅಗತ್ಯ. ಮಾತೃಭಾಷೆ ಕಲಿಕೆಯಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದ ಸಿದ್ದರಾಮಯ್ಯ, ಆಂಗ್ಲ ಸೇರಿದಂತೆ ಬೇರೆ ಭಾಷೆಗಳನ್ನು ಕಲಿಯಬೇಕು. ಆದರೆ, ಕನ್ನಡಕ್ಕೆ ಆದ್ಯತೆ ಇರಬೇಕು ಎಂದರು.
ಕನ್ನಡ ಮಾಧ್ಯಮದಲ್ಲಿ ಕಲಿತರೆ ಉತ್ತಮ ಉದ್ಯೋಗ ದೊರೆಯುವುದಿಲ್ಲ. ಜೀವನಕ್ಕೆ ತೊಡಕಾಗುತ್ತದೆಂಬ ಮೂಢನಂಬಿಕೆ ಸರಿಯಲ್ಲ ಎಂದು ಆಕ್ಷೇಪಿಸಿದ ಸಿದ್ದರಾಮಯ್ಯ, ಕನ್ನಡ ಮಾಧ್ಯಮದಲ್ಲೇ ಕಲಿತ ಹಲವು ವ್ಯಕ್ತಿಗಳು ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನಕ್ಕೇರಿರುವ ಉದಾಹರಣೆಗಳು ನಮ್ಮ ಕಣ್ಣಮುಂದಿವೆ ಎಂದು ಸ್ಪಷ್ಟಪಡಿಸಿದರು.
ನಗರ-ಗ್ರಾಮೀಣ ಪ್ರದೇಶಗಳೆಂಬ ಭೇದವಿಲ್ಲದೆ ಎಲ್ಲ ಕಡೆಗಳಲ್ಲಿಯೂ ಆಂಗ್ಲ ವ್ಯಾಮೋಹ ಹೆಚ್ಚುತ್ತಿದೆ. ಈ ಮಧ್ಯೆಯೇ ಸುಪ್ರೀಂ ಕೋರ್ಟ್ ಭಾಷಾ ಮಾಧ್ಯಮ ಆಯ್ಕೆ ಪೋಷಕರ ನಿರ್ಧಾರಕ್ಕೆ ಬಿಟ್ಟದ್ದು ಎಂದು ಹೇಳಿದೆ. ಆ ಹಿನ್ನೆಲೆಯಲ್ಲಿ ರಾಜ್ಯಭಾಷೆ ಕಲಿಕೆಗೆ ಅವಕಾಶ ಆಗುವಂತೆ ಕೇಂದ್ರ ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಮಾತನಾಡಿ, ಕನ್ನಡ ಮಾಧ್ಯಮ ಕಲಿತವರಿಗೆ ಶೇ.5ರಷ್ಟು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾರ್ತಾ ಸಚಿವ ಆರ್.ರೋಷನ್ ಬೇಗ್ ವಹಿಸಿದ್ದು, ಸಚಿವರಾದ ಕೆ.ಜೆ.ಜಾರ್ಜ್, ಉಮಾಶ್ರೀ, ಕಿಮ್ಮನೆ ರತ್ನಾಕರ, ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಲೇಖಕ ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ, ಸಂಸ್ಕೃತಿ ಇಲಾಖೆ ನಿರ್ದೇಶನ ದಯಾನಂದ ಸೇರಿದಂತೆ ಇನ್ನಿತರರು ಹಾಜರಿದ್ದರು.
ಲೋಕಾಯುಕ್ತ ಸ್ಥಾನಕ್ಕೆ ಯಾರ ಹೆಸರನ್ನು ಶಿಫಾರಸು ಮಾಡಬೇಕೆನ್ನುವುದು ಸಾರ್ವಜನಿಕ ಚರ್ಚೆಯ ವಿಚಾರವಲ್ಲ. ಆ ಹುದ್ದೆಗೆ ಸೂಕ್ತ ನ್ಯಾಯಮೂರ್ತಿಯೊಬ್ಬರನ್ನು ನೇಮಿಸುವ ಬಗ್ಗೆ ಶೀಘ್ರದಲ್ಲೇ ರಾಜ್ಯಪಾಲರಿಗೆ ಹೆಸರನ್ನು ಶಿಫಾರಸು ಮಾಡಲಾಗುವುದು.
ಸಿದ್ದರಾಮಯ್ಯ, ಮುಖ್ಯಮಂತ್ರಿ







