ತೆಲಂಗಾಣ: ಕಿಡ್ನಿ ಮಾರಾಟ ಜಾಲ ಬಯಲು; ಕಾಲೇಜ್ ವಿದ್ಯಾರ್ಥಿ ಸಹಿತ ನಾಲ್ವರ ಬಂಧನ
ಹೈದರಾಬಾದ್,ಜ.8: ಅಂತಾರಾಷ್ಟ್ರೀಯ ಕಿಡ್ನಿ ಮಾರಾಟ ಜಾಲವೊಂದನ್ನು ತೆಲಂಗಾಣ ಜಿಲ್ಲೆಯ ನಲ್ಗೊಂಡಾದಲ್ಲಿ ಭೇದಿಸ ಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ನಲ್ಗೊಂಡಾ ಪೊಲೀಸರು 22 ವರ್ಷ ವಯಸ್ಸಿನ ಸುರೇಶ್ ಹಾಗೂ ಇತರ ಮೂವರನ್ನು ಗುರುವಾರ ಬಂಧಿಸಿದ್ದಾರೆ. ಆರೋಪಿ ಸುರೇಶ್, ಹೈದರಾಬಾದ್‌ನಲ್ಲಿ ಹೊಟೇಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಯೆಂದು ತಿಳಿದು ಬಂದಿದೆ.
ಸುರೇಶ್ 2014ರಲ್ಲಿ ತನ್ನದೇ ಕಿಡ್ನಿಯನ್ನು ಮಾರಾಟ ಮಾಡಿ 5 ಲಕ್ಷ ರೂ. ಸಂಪಾದಿಸಿದ್ದ. ವಿಲಾಸಿ ಜೀವನಕ್ಕೆ ಮಾರುಹೋಗಿದ್ದ ಆತ ಆನಂತರ ಅಂತಾರಾಷ್ಟ್ರೀಯ ಕಿಡ್ನಿ ಮಾರಾಟ ಜಾಲದ ಏಜೆಂಟ್ ಆಗಿ ಕೆಲಸಮಾಡತೊಡಗಿದೆ. ಫೇಸ್‌ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ ಈ ಜಾಲವು ಕಾರ್ಯಾಚರಿಸುತ್ತಿತ್ತು. ಕಿಡ್ನಿ ಮಾರಾಟ ಮಾಡುವಂತೆ ಆತ ಇತರರಿಗೆ ಹಣದ ಆಮಿಷವೊಡ್ಡುತ್ತಿದ್ದ. ಈವರೆಗೆ ಆತ, 15 ಕಿಡ್ನಿಗಳ ಮಾರಾಟಕ್ಕೆ ದಲ್ಲಾಳಿಯಾಗಿ ಕೆಲಸ ಮಾಡಿದ್ದಾನೆನ್ನಲಾಗಿದೆ. ಇದಕ್ಕಾಗಿ ಆತನಿಗೆ 50 ಸಾವಿರ ರೂ.ಗಳಿಂದ 1 ಲಕ್ಷ ರೂ.ತನಕ ಕಮೀಶನ್ ದೊರೆತಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಈ ಜಾಲವು ಶ್ರೀಲಂಕಾದ ಕೊಲಂಬೊದ ಮೂರು ಪ್ರಮುಖ ಆಸ್ಪತ್ರೆಗಳಲ್ಲಿ ಕಿಡ್ನಿ ಕಸಿ ಶಸ್ತ್ರಕ್ರಿಯೆಯ ವ್ಯವಸ್ಥೆ ಮಾಡುತ್ತಿತ್ತು. ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಈ ಜಾಲದಲ್ಲಿ ಶಾಮೀಲಾದ ಇನ್ನೂ ಹಲವರನ್ನು ಬಂಧಿಸುವ ಸಾಧ್ಯತೆಯಿದೆಯೆಂದು ಪೊಲೀಸರು ತಿಳಿಸಿದ್ದಾರೆ.