ಉದ್ಯಾವರ ಮಖಾಂ ಉರೂಸ್ ಕಾರ್ಯಕ್ರಮ ಉದ್ಘಾಟನೆ

ಕುಂಜತ್ತೂರು, ಜ.8: ಉದ್ಯಾವರ ಸಾವಿರ ಜಮಾಅತ್ ಜುಮಾ ಮಸೀದಿಯ ಅಂಗಣದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಅಸ್ಸೈಯದ್ ಶಹೀದ್ ವಲಿಯುಲ್ಲಾಹಿರವರ ಹೆಸರಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ಮಖಾಂ ಉರೂಸ್ ಮುಬಾರಕ್ ಹಾಗೂ 17 ದಿನಗಳ ಧಾರ್ಮಿಕ ಮತಪ್ರಭಾಷಣದ ಉದ್ಘಾಟನಾ ಸಮಾರಂಭ ಗುರುವಾರ ರಾತ್ರಿ ನಡೆಯಿತು.
ಪಾಣಕ್ಕಾಡ್ ಪಾಣಕ್ಕಾಡ್ ಅಸ್ಸೈಯದ್ ಮನವ್ವರಲಿ ಶಿಹಾಬ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಧುನಿಕ ಯುಗದಲ್ಲಿ ಜೀವಿಸುತ್ತಿರುವ ನಮಗೆ ಲೋಕಕ್ಕೆ ಮಾದರಿಯಾದ ಮುಹಮ್ಮದ್ ಪೈಗಂಬರರ ಚರ್ಯೆ ಅಗತ್ಯ. ಅಲ್ಲಾಹನು ಪ್ರವಾದಿಯವರ ಮೂಲಕ ಕೊಡುಗೆಯಾಗಿ ನೀಡಿದ ಕುರ್‌ಆನ್ ಗ್ರಂಥದ ವಾಕ್ಯಗಳನ್ನು ಅನುಸರಿಸಿದರೆ ಸನ್ಮಾರ್ಗವಿದೆ. ಅನುಸರಿಸದೇ ಇರುವಾಗ ಮಾತ್ರ ಅಶಾಂತಿ ಸೃಷ್ಟಿಯಾಗುತ್ತದೆ ಎಂದು ಹೇಳಿದರು.
ಉದ್ಯಾವರ ಜಮಾಅತ್ ಸಂಯುಕ್ತ ಖಾಝಿ ಅಸ್ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಝೀಝ್ ಅಶ್ರಫಿ ಮತ ಪ್ರಭಾಷಣಗೈದರು. ಈ ಸಂದರ್ಭ ಆತ್ರಾಡಿ ಖಾಝಿ ವಿ.ಕೆ.ಅಬೂಬಕರ್ ಮುಸ್ಲಿಯಾರ್, ಉದ್ಯಾವರ ಜಮಾಅತ್ ಖತೀಬ್ ಅಬ್ದುಸ್ಸಲಾಂ ಮದನಿ, ಮೋನು ಹಾಜಿ, ಕುಂಜತ್ತೂರು ಖತೀಬ್ ಹಾಶಿರ್ ಹಾಮಿರಿ, ಉದ್ಯಾವರ ಜಮಾಅತ್ ಮಾಜಿ ಅಧ್ಯಕ್ಷ ಮೋನು ಹಾಜಿ, ಪೊಸೋಟು ಜಮಾಅತ್ ಅಧ್ಯಕ್ಷ ಬಾವ ಹಾಜಿ, ಹಮೀದ್ ತಂಙಳ್ ಹಾಗೂ 3 ಜಮಾಅತ್‌ನ ಖತೀಬರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉರೂಸ್ ಸಮಿತಿ ಅಧ್ಯಕ್ಷ ಅತ್ತಾವುಲ್ಲ ತಂಙಳ್ ಸ್ವಾಗತಿಸಿದರು. ಜಮಾಅತ್ ಪ್ರ.ಕಾರ್ಯದರ್ಶಿ ಅಬ್ದುಲ್ ಖಾದರ್ ಫಾರೂಕ್ ವಂದಿಸಿದರು.







