ಇಂದು ಪುತ್ತೂರು ನೂತನ ಬಸ್ ನಿಲ್ದಾಣ ಉದ್ಘಾಟನೆ
ಮಂಗಳೂರು, ಜ.8: ಹಿಂದೂಸ್ತಾನ್ ಪ್ರಮೋಟರ್ಸ್ ಆ್ಯಂಡ್ ಡೆವಲಪರ್ಸ್ ಪ್ರೈ.ಲಿ. ಸಂಸ್ಥೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಹಭಾಗಿತ್ವದಲ್ಲಿ ಪುತ್ತೂರಿನಲ್ಲಿ ನೂತನವಾಗಿ ನಿರ್ಮಿಸಿರುವ ಬಸ್ ನಿಲ್ದಾಣದ ಉದ್ಘಾಟನೆಯು ಜ.9ರಂದು ಪೂರ್ವಾಹ್ನ 11ಕ್ಕೆ ನೆರವರಲಿದೆ ಎಂದು ಹಿಂದೂಸ್ಥಾನ್ ಪ್ರಮೋಟರ್ಸ್ ಮತ್ತು ಡೆವೆಲಪರ್ಸ್‌ನ ಆಡಳಿತ ನಿರ್ದೇಶಕ ಡಾ.ಮುಹಮ್ಮದ್ ಇಬ್ರಾಹೀಂ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಒಟ್ಟು 33 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸುಸಜ್ಜಿತ ಬಸ್ಸು ನಿಲ್ದಾಣದ ಉದ್ಘಾಟನೆಯನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನೆರವೇರಿಸಲಿದ್ದು, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.
ನೂತನ ಬಸ್ಸು ನಿಲ್ದಾಣದಲ್ಲಿ ಏಕ ಕಾಲದಲ್ಲಿ 27 ಬಸ್‌ಗಳ ನಿಲುಗಡೆಗೆ ಅವಕಾಶವಿದೆ. ಒಟ್ಟು 2.98 ಎಕ್ರೆ ಭೂಮಿಯ 2.40 ಎಕ್ರೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಗೊಂಡಿದೆ.
ಕಟ್ಟಡದಲ್ಲಿ 3 ಬ್ಲಾಕ್‌ಗಳಿವೆ. ಎ ಮತ್ತು ಬಿ ಬ್ಲಾಕ್‌ಗಳಲ್ಲಿ ಬಸ್ ನಿಲ್ದಾಣದ ಆಡಳಿತ ಕಚೇರಿ, ವಾಣಿಜ್ಯ ತೆರಿಗೆ ಮಳಿಗೆ ಸಂಚಾರಿ ನಿಯಂತ್ರಕರ ಕೊಠಡಿ, ಆರಕ್ಷಕ ಕೊಠಡಿ, ಮಹಿಳಾ ಪ್ರಯಾಣಿಕರ ತಂಗುದಾಣ, ಮುಂಗಡ ಟಿಕೆಟ್‌ಬುಕ್ಕಿಂಗ್, ಲಗೇಜ್ ಕೊಠಡಿ, ಮಾಹಿತಿ ಮತ್ತು ವಿಚಾರಣೆ ಕೇಂದ್ರ, ಶೌಚಾಲಯ ವ್ಯವಸ್ಥೆ, ಚಾಲಕ- ನಿರ್ವಾಹಕರ ವಿಶ್ರಾಂತಿಗೃಹ, ಅಂಗವಿಕಲರ ರ್ಯಾಂಪ್, ದ್ವಿಚಕ್ರ ಹಾಗೂ ಕಾರುಗಳ ವಿಶಾಲ ಪಾರ್ಕಿಂಗ್ ಸೌಲಭ್ಯಗಳಿವೆ. ಸಿ ವಿಭಾಗದಲ್ಲಿ ಬಹೂಪಯೋಗಿ ವಾಣಿಜ್ಯ ಮಳಿಗೆಗಳಿವೆ ಎಂದು ಉಸ್ತುವಾರಿ ವ್ಯವಸ್ಥಾಪಕ ಜಗದೀಶ್ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕೃಷ್ಣ ಪ್ರಸಾದ್‌ಆಳ್ವ, ಖಲೀಲ್, ಇವೆಂಟ್ ಮ್ಯಾನೇಜರ್ ಕಬೀರ್ ಉಪಸ್ಥಿತರಿದ್ದರು.







