ಸರಿ- ಬೆಸ ನಿಯಮಾವಳಿ ಮುಂದುವರಿಕೆಗೆ ಆಪ್ ಒಲವು

ದೆಹಲಿಯಲ್ಲಿ 15 ದಿನಗಳ ಕಾಲ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಸರಿ- ಬೆಸ ನಿಯಮವನ್ನು ಮುಂದುವರಿಸಲು ಇಚ್ಛಿಸಿರುವುದಾಗಿ ಅಲ್ಲಿನ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಹೇಳಿದೆ. ಈ ಕ್ರಮ ರಾಜಧಾನಿಯ ಮಾಲಿನ್ಯ ನಿಯಂತ್ರಣದ ಮೇಲೆ ಧನಾತ್ಮಕ ಪರಿಣಾಮ ಬೀರಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ಜಿ.ರೋಹಿಣಿ ಹಾಗೂ ನ್ಯಾಯಮೂರ್ತಿ ಜಯಂತ್‌ನಾಥ್ ಅವರಿರುವ ನ್ಯಾಯಪೀಠದ ಮುಂದೆ ಸ್ಥಿತಿಗತಿ ವರದಿಯನ್ನು ಸರ್ಕಾರದ ಪರವಾಗಿ ಸಲ್ಲಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ, ಈ ಯೋಜನೆ ಜಾರಿಗೆ ತಂದ ಬಳಿಕ ಜನವರಿ 1 ರಿಂದ 8ರವರೆಗೆ ಮಾಲಿನ್ಯ ಎಷ್ಟು ಕಡಿಮೆಯಾಗಿದೆ ಎಂದು ಅಧ್ಯಯನ ಮಾಡಲಾಗಿದೆ ಎಂದು ವಿವರಿಸಿದರು.
ಮಾಲಿನ್ಯ ತುರ್ತು ಸ್ಥಿತಿ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯ ಎಂದು ಸಾಳ್ವೆ ವಾದಿಸಿದರು. ಈ ಬಾರಿ ಚಳಿಗಾಲದ ವೇಳೆಗೆ ದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ಗರಿಷ್ಠ ಮಟ್ಟಕ್ಕಿಂತ ನಾಲ್ಕು ಪಟ್ಟು ಅಧಿಕವಾಗಿರುತ್ತದೆ ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ವರದಿಯನ್ನು ಹೈಕೋರ್ಟ್ ಗಮನಕ್ಕೆ ತಂದರು.
ಸರ್ಕಾರದ ಈ ಕ್ರಮದ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತ ತೀರ್ಪನ್ನು ನ್ಯಾಯಾಲಯ ಈ ತಿಂಗಳ 11ಕ್ಕೆ ಕಾಯ್ದಿರಿಸಿತು.





