ಮತಬೇಟೆ ತಂತ್ರ: ತಮಿಳುನಾಡು ಜಲ್ಲಿಕಟ್ಟು ನಿಷೇಧ ತೆರವು

ತಮಿಳುನಾಡಿನ ಅತ್ಯಂತ ಜನಪ್ರಿಯ ಹಾಗೂ ವಿವಾದಾತ್ಮಕ ಜಲ್ಲಿಕಟ್ಟು ಪಾರಂಪರಿಕ ಕ್ರೀಡೆಯನ್ನು ಮುಂದುವರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ವರ್ಷ ರಾಜ್ಯ ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಮತಬೇಟೆ ದೃಷ್ಟಿಯಿಂದ ಕೇಂದ್ರ ಈ ಕ್ರಮಕ್ಕೆ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರಾಣಿಹಕ್ಕು ಚಳವಳಿಗಾರರ ತೀವ್ರ ವಿರೋಧದ ನಡುವೆಯೂ ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಓಲೈಕೆ ಕ್ರಮಕ್ಕೆ ಮುಂದಾಗಿದೆ.
ಕೇಂದ್ರದ ಕ್ರಮಕ್ಕೆ ಜನರು ಪಟಾಕಿ ಸಿಡಿಸಿ, ಬೀದಿಗಿಳಿದು ಮೆರವಣಿಗೆ ನಡೆಸಿ ಹರ್ಷ ವ್ಯಕ್ತಪಡಿಸಿದ್ದಾರೆ. ಇಂಥ ಉದ್ದೇಶಗಳಿಗೆ ಪ್ರಾಣಿಬಳಕೆಯನ್ನು ನಿಷೇಧಿಸಿ ಸುಪ್ರೀಂಕೋರ್ಟ್ 2014ರಲ್ಲಿ ನೀಡಿರುವ ತೀರ್ಪಿಗೆ ವಿರುದ್ಧವಾಗಿ ಕೈಗೊಂಡಿರುವ ಕೇಂದ್ರದ ನಿರ್ಧಾರ, ರಾಜಕೀಯ ನೆಲೆಯೇ ಇಲ್ಲದ ರಾಜ್ಯದಲ್ಲಿ ಹೆಜ್ಜೆಯೂರುವ ದೃಷ್ಟಿಯಿಂದ ಕೈಗೊಂಡದ್ದು ಎಂದು ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಂಗಲ್ ಹಬ್ಬಕ್ಕೆ ಒಂದು ವಾರ ಬಾಕಿ ಉಳಿದ ಸಂದರ್ಭದಲ್ಲಿ, ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ , ಜಲ್ಲಿಕಟ್ಟು ಹಾಗೂ ಎತ್ತಿನಬಂಡಿ ಸ್ಪರ್ಧೆ ನಡೆಸಲು ಅವಕಾಶ ನೀಡುವ ಅಧಿಸೂಚನೆ ಹೊರಡಿಸಿದೆ. ಈ ಕ್ರಮ ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆಯಾಗುತ್ತದೆ ಎಂಬ ಕಾನೂನು ಸಚಿವಾಲಯ ಹಾಗೂ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅಭಿಪ್ರಾಯವನ್ನು ಧಿಕ್ಕರಿಸಿ ಈ ನಿರ್ಧಾರ ಕೈಗೊಂಡಿದೆ.
ಪ್ರಾಣಿಗಳಿಗೆ ಅಗತ್ಯ ಸುರಕ್ಷಾ ಕ್ರಮ ಕೈಗೊಳ್ಳಬೇಕು ಹಾಗೂ ಹಿಂಸೆ ಮಾಡಬಾರದು ಎಂಬ ಷರತ್ತಿನೊಂದಿಗೆ ಈ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಕ್ರೀಡೆಗೆ ಅನುಮತಿ ನೀಡಲಾಗಿದೆ ಎಂದು ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಸಮರ್ಥಿಸಿಕೊಂಡಿದ್ದಾರೆ.







