ಯುಎಇ: ಗಾಣಿಗ ಸಮಾಜದ ಸಹಮಿಲನ

ದುಬೈ: ಇಲ್ಲಿನ ಗಾಣಿಗ ಸಮಾಜದ ವಾರ್ಷಿಕ ಸಹಮಿಲನ ಕಾರ್ಯಕ್ರಮವು, ಇತ್ತೀಚೆಗೆ ಝಬೀಲ್ ಪಾರ್ಕ್‌ನಲ್ಲಿ ನಡೆಯಿತು. ಯುಎಇ ಗಾಣಿಗ ಸಮಾಜದ ಅಧ್ಯಕ್ಷ ಸುರೇಶ್ ಎನ್.ಗಾಣಿಗ ಹಾಗೂ ಸಂಘದ ಇತರ ಪದಾಧಿಕಾರಿಗಳು ಮತ್ತು ಸಮಿತಿ ಸದಸ್ಯರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸದಸ್ಯರು ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಸಂಘದ ಸದಸ್ಯರನ್ನು ನಾಲ್ಕು ಬಣ್ಣದ ಸಮವಸ್ತ್ರಗಳೊಂದಿಗೆ ಪ್ರತ್ಯೇಕ ನಾಲ್ಕು ತಂಡಗಳಾಗಿ ವಿಭಾಗಿಸಿ, ಅವರ ನಡುವೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದುದು ಕಾರ್ಯಕ್ರಮದ ವೈಶಿಷ್ಟವಾಗಿತ್ತು.
ವಯಸ್ಕರಿಗಾಗಿ ಸ್ಕೂಕರ್, ಲಾಂಗೆಸ್ಟ್ ಯಾರ್ಡ್, ಹಗ್ಗಜಗ್ಗಾಟ ಇತ್ಯಾದಿ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಪ್ರತಿಯೊಬ್ಬ ಸದಸ್ಯರೂ ಅತ್ಯುತ್ಸಾಹದೊಂದಿಗೆ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡರು. ಎಳೆಯ ವಯಸ್ಸಿನ ಚಿಣ್ಣರು ಹುರುಪಿನಿಂದಲೇ ಆಟಗಳಲ್ಲಿ ಭಾಗವಹಿಸಿದರು. ಅವರಿಗಾಗಿ ‘ಲೆಮನ್ ಆ್ಯಂಡ್ ಸ್ಪೂನ್’ ಹಾಗೂ ‘ಔಟ್ ಆಫ್ ದಿ ಬೌಂಡರಿ’ ಮತ್ತಿತರ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಸ್ಪರ್ಧೆಗಳಲ್ಲಿ ‘ರೆಡ್ ಟೀಂ’ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ವಿಜೇತರಿಗೆ ಸುರೇಶ್ ಎನ್.ಗಾಣಿಗ ಹಾಗೂ ದಯಾನಂದ ರಾವ್ ಪ್ರಶಸ್ತಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿಣ್ಣರಿಗೆ ಅರುಣ್ ಗಾಣಿಗ ಪ್ರಾಯೋಜಕತ್ವದಲ್ಲಿ ಫನ್‌ಸಿಟಿ ಗಿಫ್ಟ್‌ಕಾರ್ಡ್ ಹಾಗೂ ಸಿಹಿತಿಂಡಿಗಳನ್ನು ವಿತರಿಸಲಾಯಿತು.







