ವಲಸಿಗರ ಪ್ಯಾಕೇಜ್, ಸೌಲಭ್ಯಗಳ ಪುನರ್ವಿಮರ್ಶೆ ಅಗತ್ಯ

ಸಮೀಕ್ಷಾ ವರದಿ ಬಹಿರಂಗ
ದುಬೈ: ಸಾಗರೋತ್ತರ ದೇಶಗಳಿಗೆ ತೆರಳುವ ವಿದೇಶಿಗರ ನಿರೀಕ್ಷೆಗಳಿಗೆ ಸ್ಪಂದಿಸುವ ಉದ್ದೇಶದಿಂದ, ಯುಎಇ ಹಾಗೂ ಮಧ್ಯಪ್ರಾಚ್ಯದ ಇತರ ಭಾಗಗಳು ಮತ್ತು ಉತ್ತರ ಆಫ್ರಿಕಾ (ಮೆನಾ) ಪ್ರಾಂತದ ಉದ್ಯೋಗಿಗಳ ವಲಸೆ ಪ್ಯಾಕೇಜ್‌ಗಳು ಹಾಗೂ ಸೌಲಭ್ಯಗಳ ಪುನರ್‌ವಿಮರ್ಶೆಯ ಅಗತ್ಯವಿದೆಯೆಂದು ನೂತನ ಸಮೀಕ್ಷೆಯೊಂದು ತಿಳಿಸಿದೆ.
ತಾಯ್ನಡಿಗೆ ವಾಪಸಾತಿ, ಸಂವಹನ, ಭಾಷೆ ಹಾಗೂ ಸಾಂಸ್ಕೃತಿಕ ಜಾಗೃತಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉದ್ಯೋಗಿಗಳ ಆಶೋತ್ತರಳಿಗೆ ಉದ್ಯೋಗದಾತರು ಸ್ಪಂದಿಸಿಲ್ಲವೆಂದು 2015ನೆ ಸಾಲಿನ ಜಾಗತಿಕ ಚಲನಶೀಲತೆ ಪ್ರವೃತ್ತಿ ಸಮೀಕ್ಷೆಯು ಬಹಿರಂಗಪಡಿಸಿದೆ. 156 ದೇಶಗಳಲ್ಲಿ ಉದ್ಯೋಗದಲ್ಲಿರುವ 2700ಕ್ಕೂ ಅಧಿಕ ವಲಸಿಗರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಮಧ್ಯಪ್ರಾಚ್ಯದಲ್ಲಿ ವಲಸಿಗರು, ಸಾಂಸ್ಕೃತಿಕವಾಗಿ ಹೊಸ ಪರಿಸರಕ್ಕೆ ಹಾಗೂ ವೃತ್ತಿಜೀವನಕ್ಕೆ ಹೊಂದಿಕೊಳ್ಳುವಂತೆ ಮಾಡಲು ಉದ್ಯೋಗದಾತರು ಇನ್ನೂ ಹೆಚ್ಚು ಶ್ರಮಿಸಬೇಕಾದ ಅಗತ್ಯವಿದೆಯೆಂದು ಸಮೀಕ್ಷೆ ಹೇಳಿದೆ.
ವಿಶೇಷವಾಗಿ ಯುಎಇನಲ್ಲಿ ಮೆನಾ ಪ್ರಾಂತವು ಈಗಲೂ ಕೂಡಾ ವಲಸಿಗರಿಗೆ, ಉದ್ಯೋಗಾವಕಾಶಗಳಿಗೆ ಅತ್ಯಂತ ಅಪೇಕ್ಷಣೀಯ ತಾಣವಾಗಿದೆ.ಎಂದು ಅದು ತಿಳಿಸಿದೆ.
ಸಿಗ್ನಾ ಗ್ಲೋಬಲ್ ಹೆಲ್ತ್ ಬೆನಿಫಿಟ್ಸ್ ಹಾಗೂ ರಾಷ್ಟ್ರೀಯ ವಿದೇಶ ವ್ಯಾಪಾರ ಮಂಡಳಿ (ಎನ್‌ಎಫ್‌ಟಿಸಿ)ಯು ಈ ಅಧ್ಯಯನ ಸಮೀಕ್ಷೆಯನ್ನು ನಡೆಸಿತ್ತು. ಅತೃಪ್ತಿಯ ಕ್ಷೇತ್ರಗಳು
ಮೆನಾದಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಕೇವಲ ಶೇ.25ರಷ್ಟು ಮಂದಿ, ತಾವು ಇನ್ನೊಂದು ದೇಶಕ್ಕೆ ತೆರಳುವ ಮುನ್ನ ಆ ದೇಶದ ಭಾಷೆಯ ಬಗ್ಗೆ ತರಬೇತಿ ಪಡೆದಿದ್ದೇವೆಂದು ಹೇಳಿಕೊಂಡಿದ್ದಾರೆ. ಮೂರನೆ ಒಂದರಷ್ಟು ಮಂದಿ (34 ಶೇ.), ಅಂತರ್‌ಸಾಂಸ್ಕೃತಿಕ ತರಬೇತಿಯನ್ನು ಪಡೆದಿದ್ದಾರೆ. ಉದ್ಯೋಗದಾತರು, ಅನಿವಾಸಿಗಳ ಕುಟುಂಬಗಳಿಗೆ ಸಾಂಸ್ಕೃತಿಕ ಹಾಗೂ ಭಾಷಾ ತರಬೇತಿಯನ್ನು ಒದಗಿಸಬೇಕೆಂದು ಶೇ.8ರಷ್ಟು ಮಂದಿ ಅಭಿಪ್ರಾಯಿಸಿದ್ದಾರೆ.
ತಮ್ಮ ಸಿಬ್ಬಂದಿಗೆ ಅವರ ತಾಯ್ನಡಿನಲ್ಲಿ ಪುನರ್ವಸತಿ ಸೌಲಭ್ಯಗಳನ್ನು ಒದಗಿಸುವಲ್ಲಿಯೂ ಈ ಪ್ರದೇಶದ ಕಂಪೆನಿಗಳು ಸಮಾಧಾನಕರ ನಿರ್ವಹಣೆ ತೋರಿಲ್ಲವೆಂದು ಸಮೀಕ್ಷೆ ಹೇಳಿದೆ. ತಾಯ್ನೆಡಿಗೆ ವಾಪಸಾದವರ ಪೈಕಿ ಒಂದು ಸಣ್ಣ ಭಾಗ (ಮೂರನೆ ಒಂದರಷ್ಟು)ದಷ್ಟು ಮಂದಿ ಮಾತ್ರವೇ, ತಾಯ್ನೆಡಿನಲ್ಲಿ ತಮ್ಮ ಪುನರ್ವಸತಿಗೆ ಸಹಕರಿಸುವಲ್ಲಿ ತಮ್ಮ ಉದ್ಯೋಗದಾತನ ಕೊಡುಗೆ ಉತ್ತಮವೆಂದು ಹೇಳಿದ್ದರೆ, ಕೇವಲ ಶೇ.11 ಮಂದಿ ಮಾತ್ರ ಅತ್ಯುತ್ತಮವೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಸ್ವದೇಶಕ್ಕೆ ವಾಪಸಾಗುವ ಕನಿಷ್ಠ ಮೂರು ತಿಂಗಳುಗಳ ಮೊದಲು ಪುನರ್ವಸತಿ ವ್ಯವಸ್ಥೆಯನ್ನು ಆರಂಭಿಸುವಂತೆ ಹಲವಾರು ವಲಸಿಗರು ಶಿಫಾರಸು ಮಾಡಿದ್ದಾರೆಂದು ಸಿಗ್ನಾ ಗ್ಲೋಬಲ್ ಹೆಲ್ತ್ ಬೆನಿಫಿಟ್ಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೊವಾರ್ಡ್ ಗೊಫ್ ತಿಳಿಸಿದ್ದಾರೆ.
ಉದ್ಯೋಗಕ್ಕೆ ನೇಮಿಸುವ ಮೊದಲು ಹಾಗೂ ಆನಂತರ ಉದ್ಯೋಗದಾತರು, ತಮ್ಮ ಸಿಬ್ಬಂದಿಯೊಂದಿಗೆ ಉತ್ತಮ ಸಂವಹನವನ್ನು ಹೊಂದಿರಬೇಕೆಂದು ಈ ಪ್ರದೇಶದ ವಲಸಿಗರು ಬಯಸುತ್ತಾರೆ.
ಕಂಪೆನಿಯು ತಮ್ಮಂದಿಗೆ ಸಂವಹನವನ್ನು ಏರ್ಪಡಿಸುವ ವಿಷಯದಲ್ಲಿ ಉತ್ತಮ ನಿರ್ವಹಣೆಯನ್ನು ತೋರಿದೆಯೆಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 40ಕ್ಕೂ ಅಧಿಕ ಮಂದಿ ತಿಳಿಸಿದರೆ, ಕೇವಲ 18 ಮಂದಿ ಮಾತ್ರ ‘ಅತ್ಯುತ್ತಮವಾಗಿತ್ತು’ ಎಂದಿದ್ದಾರೆ. ಐದನೆ ಒಂದರಷ್ಟು ಮಂದಿ ಸಂವಹನವು ಆಗಾಗ್ಗೆ ಮತ್ತು ವೈಯಕ್ತಿಕ ನೆಲೆಯಲ್ಲಿ ನಡೆಯುತ್ತಿರಬೇಕು ಎಂದು ಹೇಳಿದ್ದಾರೆ.
ಮಧ್ಯಪ್ರಾಚ್ಯದ ಪ್ರಮುಖ ಹಣಕಾಸು ಸಂಸ್ಥೆ ಮಾಸ್ರಿ ಪ್ರಕಾರ,ಮುಂದಿನ ವರ್ಷ ದುಬೈನಲ್ಲಿ ನಡೆಯಲಿರುವ ಎಕ್ಸ್ ಪೊ 2020 ಮೇಳವು, ಹಲವಾರು ಮೂಲಸೌಕರ್ಯ ಯೋಜನೆಗಳ ನಿರ್ಮಾಣ ಹಾಗೂ ಅಭಿವೃದ್ಧಿಯನ್ನು ಒಳಗೊಂಡಿರುವುದರಿಂದ ಅನೇಕ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆಯೆಂದರು.
ಎಕ್ಸ್‌ಪೊ 2020 ಮೇಳವು, ದೇಶದಲ್ಲಿ ಕೈಗೊಳ್ಳಲಾಗಿರುವ ಹಲವಾರು ಅಭಿವೃದ್ಧಿ ಯೋಜನೆಗಳ ಸಂಖ್ಯೆ ಹೆಚ್ಚಲು ನೆರವಾಗಲಿದೆ. ಪ್ರವಾಸೋದ್ಯಮ ವಲಯದಲ್ಲಿಯೂ ವಿಫುಲವಾದ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆಯೆಂದು ಅದು ಹೇಳಿದೆ.
ಉದ್ಯೋಗ ಸೂಚ್ಯಂಕ ಸಮೀಕ್ಷೆಯನ್ನು ಆಧರಿಸಿ ಹೇಳುವುದಾದರೆ, ಮುಂದಿನ ವರ್ಷ ಯುಎಇನಲ್ಲಿ ಮಾನವಸಂಪನ್ಮೂಲ ವೃತ್ತಿಪರರು ಹಾಗೂ ಕಾರ್ಯನಿರ್ವಹಣಾ ಸಹಾಯಕರ ಹುದ್ದೆಗಳು ಅಪಾರ ಸಂಖ್ಯೆಯಲ್ಲಿ ಸೃಷ್ಟಿಯಾಗಲಿವೆಯೆಂದು ಮಾಸ್ರಿ ತಿಳಿಸಿದ್ದಾರೆ. ಸೇಲ್ಸ್ ಮ್ಯಾನೇಜರ್ ಎರಡನೆ ಅತ್ಯಂತ ಜನಪ್ರಿಯ ಹುದ್ದೆಯಾಗಲಿದೆ, ತದನಂತರ ಅಕೌಂಟೆಂಟ್‌ಗಳು ಹಾಗೂ ರಿಸೆಪ್ಶನಿಸ್ಟ್ ವೃತ್ತಿಗಳಿಗೆ ಕ್ರಮವಾಗಿ ಹೆಚ್ಚಿನ ಬೇಡಿಕೆಯಿರುವುದು ಎಂದು ಸಮೀಕ್ಷೆಯು ಹೇಳಿದೆ.
ಮಧ್ಯಮ ಮಟ್ಟದ ಅನುಭವವಿರುವ ಅಭ್ಯರ್ಥಿಗಳ ನೇಮಕಕ್ಕೆ ತಾವು ಪ್ರಾಶಸ್ತ್ಯ ನೀಡುವುದಾಗಿ ಗಣನೀಯ ಸಂಖ್ಯೆಯ ಕಂಪೆನಿಗಳು (ಶೇ.37) ಸಮೀಕ್ಷೆಯಲ್ಲಿ ತಿಳಿಸಿದರೆ, ಮೂರನೆ ಒಂದರಷ್ಟು ಸಂಸ್ಥೆಗಳು, ತಾವು ಆಡಳಿತ ನಿರ್ವಹಣೆಯಲ್ಲಿ ಪರಿಣತಿಯಿರುವ ವೃತ್ತಿಪರರನ್ನು ನೇಮಿಸಿಕೊಳ್ಳಲು ಇಷ್ಟಪಡುವುದಾಗಿ ಹೇಳಿವೆ.
ಶೇ.27ರಷ್ಟು ಕಂಪೆನಿಗಳು, ತಾವು ಮಾರ್ಕೆಟಿಂಗ್ ವೃತ್ತಿಪರರಿಗಾಗಿ ಹುಡುಕಾಡುತ್ತಿರುವುದಾಗಿ ಹೇಳಿದರೆ, ಶೇ. 25 ಕಂಪೆನಿಗಳು ಕಂಪ್ಯೂಟರ್ ಪರಿಣತಿಯುಳ್ಳವರನ್ನು ಆಯ್ಕೆ ಮಾಡಿಕೊಳ್ಳಲು ಇಚ್ಛಿಸಿವೆ.
ಬ್ಯುಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ/ಸ್ನಾತಕೋತ್ತರ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಯುಎಇನಲ್ಲಿ ಅತಿ ಹೆಚ್ಚಿನ ಬೇಡಿಕೆಯಿದೆ. ಅರೇಬಿಕ್ ಹಾಗೂ ಇಂಗ್ಲಿಷ್‌ನಲ್ಲಿ ಉತ್ತಮ ಸಂವಹನ ಸಾಮರ್ಥ್ಯ ಹಾಗೂ ನಾಯಕತ್ವದ ನೈಪುಣ್ಯತೆಯುಳ್ಳ ಅಭ್ಯರ್ಥಿಗಳ ನೇಮಕಕ್ಕೆ ಕಂಪೆನಿಗಳು ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿವೆಯೆಂದು ಮಾಸ್ರಿ ತಿಳಿಸಿದೆ.
ಧನಾತ್ಮಕ ಅಂಶಗಳು
ಅಧ್ಯಯನದ ಪ್ರಕಾರ ಮೆನಾ ಪ್ರಾಂತದ ಕಂಪೆನಿಗಳು, ಸಿಬ್ಬಂದಿಯನ್ನು ಪ್ರದೇಶಕ್ಕೆ ಕರೆಸಿಕೊಳ್ಳುವ ವಿಷಯದಲ್ಲಿ ಉತ್ತಮ ನಿರ್ವಹಣೆಯನ್ನು ತೋರಿರುವುದಾಗಿ ಸಮೀಕ್ಷೆಯ ಫಲಿತಾಂಶಗಳು ತಿಳಿಸಿವೆ. ತಮ್ಮ ಉದ್ಯೋಗಿಗಳಿಗೆ ಸಮರ್ಪಕವಾದ ವೈದ್ಯಕೀಯ ಸೌಲಭ್ಯಗಳನ್ನು ನೀಡುವಲ್ಲಿ ಹಾಗೂ ಅವರಿಗೆ ಆರೋಗ್ಯ ಸುರಕ್ಷತಾ ಯೋಜನೆಗಳನ್ನು ಒದಗಿಸುವಲ್ಲಿ ಉತ್ತಮ ನಿರ್ವಹಣೆಯನ್ನು ತೋರಿವೆಯೆಂದು ಸಮೀಕ್ಷೆಯು ತಿಳಿಸಿದೆ.







