ಎಮಿರೇಟ್ ವಿದ್ಯಾರ್ಥಿ ಫಹದ್ ಅಲ್ ಶೈಬಾನಿಗೆ ರೋಡ್ಸ್ ಸ್ಕಾಲರ್ಶಿಪ್

ಅಬುಧಾಬಿ: ಖಲೀಫಾ ವಿಶ್ವವಿದ್ಯಾನಿಲಯದ ಅಧ್ಯಕ್ಷ ಫಹದ್ ಅಲ್ ಶೈಬಾನಿ, ಪ್ರತಿಷ್ಠಿತ ರೋಡ್ಸ್ ಸ್ಕಾಲರ್‌ಶಿಪ್ ಪಡೆದ ಪ್ರಥಮ ಎಂಜಿನಿಯರಿಂಗ್ ಎಮಿರೇಟ್ ವಿದ್ಯಾರ್ಥಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪುರಸ್ಕಾರವು ಪ್ರತಿಭಾವಂತ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಬ್ರಿಟನ್‌ನ ಆಕ್ಸ್‌ಫರ್ಡ್ ವಿವಿಯಲ್ಲಿ ಅಧ್ಯಯನ ನಡೆಸುವ ಅವಕಾಶವನ್ನು ಒದಗಿಸಿಕೊಡುತ್ತದೆ.
ಶಬಾನಿ, ಆಕ್ಸ್‌ಫರ್ಡ್ ವಿವಿಯಲ್ಲಿ ಎರಡು ವರ್ಷ ಪದವಿ ಅಧ್ಯಯನ ನಡೆಸಲಿದ್ದು, ಅವರಿಗೆ ಈ ಸ್ಕಾಲರ್‌ಶಿಪ್ ಆರ್ಥಿಕವಾಗಿ ನೆರವಾಗಲಿದೆ. ಎರಡು ವರ್ಷಗಳ ಅವಧಿಯ ಅವರ ಬೋಧನಾಶುಲ್ಕ ಹಾಗೂ ಸಣ್ಣ ಮೊತ್ತದ ಸ್ಟೈಪೆಂಡ್ ಕೂಡಾ ಅವರಿಗೆ ದೊರೆಯಲಿದೆ. ಯುಎಇನಿಂದ ಬ್ರಿಟನ್‌ಗೆ ಅವರ ಆಗಮನ ಹಾಗೂ ನಿರ್ಗಮನದ ವಿಮಾನವೆಚ್ಚವನ್ನು ಕೂಡಾ ಭರಿಸಲಾಗುವುದು.
ರೋಡ್ಸ್ ಸ್ಕಾಲರ್‌ಶಿಪ್‌ಗಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು, ಹಲವು ಪ್ರೊಫೆಸರ್‌ಗಳು ಹಾಗೂ ತಜ್ಞರಿಂದ ಸಂದರ್ಶನಕ್ಕೊಳಪಡ ಬೇಕಾಗುತ್ತದೆ ಹಾಗೂ ವಿವಿಧ ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ಅರ್ಜಿದಾರ ವಿದ್ಯಾರ್ಥಿಗಳಲ್ಲಿ ಕೇವಲ 0.7 ಮಂದಿ ಮಾತ್ರವೇ ಪರೀಕ್ಷೆಯಲ್ಲಿ ಯಶಸ್ವಿಯಾಗುವ ಸಾಧ್ಯತೆಯಿದೆ.
ನಾಲ್ಕು ನಿರ್ದಿಷ್ಟ ಮಾನದಂಡಗಳನ್ನು ಆಧರಿಸಿ ವಿದ್ಯಾರ್ಥಿಗಳನ್ನು ರೋಡ್ಸ್ ಸ್ಕಾಲರ್‌ಶಿಪ್‌ಗೆ ಆಯ್ಕೆ ಮಾಡಲಾಗುತ್ತದೆ. ಬುದ್ಧಿಮತ್ತೆ, ನಡವಳಿಕೆ, ನಾಯಕತ್ವ ಹಾಗೂ ಸೇವಾ ಬದ್ಧತೆ ಈ ನಾಲ್ಕು ಮಾನದಂಡಗಳಾಗಿವೆ.
ಖಲೀಫಾ ವಿವಿಯ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಫಹದ್ ಒಬ್ಬರು. ಅವರು ಸಾಧಿಸಿದ ಯಶಸ್ಸು, ಅತ್ಯುನ್ನತ ಗುಣಮಟ್ಟದ ಶೈಕ್ಷಣಿಕ ಸೌಕರ್ಯಗಳನ್ನು ಹಾಗೂ ಮೂಲಸೌಕರ್ಯಗಳನ್ನು ಒದಗಿಸುವ ಯುಎಇ ನಾಯಕತ್ವದ ಬದ್ಧತೆಗೆ ಹಾಗೂ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣವನ್ನು ಒದಗಿಸುವ ಖಲೀಫಾ ವಿವಿಯ ಸಾಮರ್ಥ್ಯಕ್ಕೆ ಇನ್ನೊಂದು ಸಾಕ್ಷಿಯಾಗಿದೆ.
ಈ ವರ್ಷ ಯುಎಇನಿಂದ ರೋಡ್ಸ್ ಸ್ಕಾಲರ್‌ಶಿಪ್‌ಗೆ ಆಯ್ಕೆಯಾದ ಇಬ್ಬರು ವಿದ್ಯಾರ್ಥಿಗಳಲ್ಲಿ ಫಹದ್ ಒಬ್ಬರಾಗಿದ್ದಾರೆ. ಅಬುಧಾಬಿಯ ನ್ಯೂಯಾರ್ಕ್ ವಿವಿಯಲ್ಲಿ ಅಧ್ಯಯನ ನಡೆಸಿರುವ ಜೋರ್ಡಾನ್ ಮೂಲದ ವಿದ್ಯಾರ್ಥಿನಿ ಫರಾಹ್ ಶಾವೌತ್ ಈ ಸ್ಕಾಲರ್‌ಶಿಪ್ ಪಡೆದ ಇನ್ನೊಬ್ಬರು.







