ದುಬೈ 16 ಪಥದ ಫ್ಲೈಓವರ್ನ ಮೊದಲ ಹಂತ ಪೂರ್ಣ

ದುಬೈ: ದುಬೈ ಕಾಲುವೆ ಯೋಜನೆಯ ಭಾಗವಾಗಿ ಶೇಖ್ ಝಾಯೆದ್ ರಸ್ತೆಯಲ್ಲಿ ನಿರ್ಮಿಸಲಾಗುತ್ತಿರುವ 16 ಪಥಗಳ ಫ್ಲೈಓವರ್ ಯೋಜನೆಯ ಮೊದಲ ಹಂತವು ಪೂರ್ಣಗೊಳ್ಳುವ ಹಂತದಲ್ಲಿದ್ದು, ಜನವರಿ ತಿಂಗಳ ಮಧ್ಯದೊಳಗೆ ಸಂಚಾರಕ್ಕೆ ಸಿದ್ಧವಾಗುವ ನಿರೀಕ್ಷೆಯಿದೆ. ಮೊದಲ ಹಂತದಲ್ಲಿ ಶಾರ್ಜಾದೆಡೆಗೆ ವಾಹನಸಂಚಾರವನ್ನು ಸಾಗಿಸುವ ಎಂಟು ಪಥಗಳ ಸೇತುವೆಯನ್ನು ನಿರ್ಮಿಸಲಾಗಿದ್ದು, ಅದರ ಕಾಮಗಾರಿ ಅಂತಿಮಹಂತಕ್ಕೆ ತಲುಪಿದೆ.
‘‘ದುಬೈ ಕಾಲುವೆ ಯೋಜನೆಯ ಕಾಮಗಾರಿಯು ಭರದಿಂದ ಸಾಗುತ್ತಿದೆ. ಶೇಖ್ ಝಾಯೆದ್ ರಸ್ತೆಯ ಮೇಲೆ ನಿರ್ಮಾಣಗೊಳ್ಳುತ್ತಿರುವ ಒಂದು ಫ್ಲೈಓವರ್, ಬಹುತೇಕ ಸಿದ್ಧವಾಗಿದೆ. ರಸ್ತೆ ಕಾಮಗಾರಿ, ಬೀದಿದೀಪಗಳು ಹಾಗೂ ಅಕ್ಕಪಕ್ಕದಲ್ಲಿ ಕಂಬಿಗಳ ಸ್ಥಾಪನೆ ಸೇರಿದಂತೆ ಫ್ಲೈಓವರ್ ಮೇಲಿನ ಎಲ್ಲಾ ಪ್ರಮುಖ ಕೆಲಸಗಳು ಪೂರ್ತಿಯಾಗಿವೆ. ಈಗ ಈ ಕೆಲಸಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆಯೆಂದು, ಈ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಜಿನಿಯರ್ ಒಬ್ಬರು ತಿಳಿಸಿದ್ದಾರೆ.

ಫ್ಲೈಓವರ್ ಸಿದ್ಧವಾದ ಬಳಿಕ ಶಾರ್ಜಾದೆಡೆಗೆ ಸಾಗುವ ವಾಹನಸಂಚಾರವನ್ನು ಫ್ಲೈಓವರ್‌ನೆಡೆಗೆ ತಿರುಗಿಸಲಾಗುವುದು. ಆ ಬಳಿಕ ಸೇತುವೆಯ ದ್ವಿತೀಯ ಭಾಗದ ಕಾಮಗಾರಿಯು ಆರಂಭಗೊಳ್ಳಲಿದ್ದು, ಅದು ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಶೇಖ್ ಝಾಯೆದ್ ರೋಡ್ ಫ್ಲೈಓವರ್ ಸುಮಾರು 800 ಮೀಟರ್ ವಿಸ್ತಾರವಿದ್ದು, ಅದು ನೆಲದಿಂದ ಎಂಟು ಮೀಟರ್‌ವರೆಗೆ ಏರಲಿದೆ. ಎರಡೂ ದಿಕ್ಕುಗಳಿಗೆ ಸಾಗುವ ಸರ್ವಿಸ್ ರೋಡ್‌ಗಳನ್ನು ಕೂಡಾ ಈ ಫ್ಲೈಓವರ್ ಒಳಗೊಂಡಿದೆ. ಅಲ್‌ವಾಸಿ ರಸ್ತೆಯ ಮೇಲಿರುವ ಚತುಷ್ಪಥ ಫ್ಲೈಓವರ್ ಹಾಗೂ ಜುಮೈರಾ ರಸ್ತೆಯ ಮೇಲಿರುವ ಷಟ್ಪಥ ಫ್ಲೈಓವರ್‌ಗಳ ಜೊತೆಗೂಡಿರುವ 16 ಪಥಗಳ ಫ್ಲೈಓವರ್‌ನ ಕೆಳಗೆ3.2 ಕಿ.ಮೀ. ವಿಸ್ತೀರ್ಣ ನೀರಿನ ಕಾಲುವೆಯೊಂದನ್ನು ನಿರ್ಮಿಸಲಾಗುವುದು.
ಜುಮೈರಾ ರಸ್ತೆಯ ಮೇಲಿನ ಫ್ಲೈಓವರ್‌ನ ಕಾಮಗಾರಿ ಕೂಡಾ ಭರದಿಂದ ನಡೆಯುತ್ತಿದೆ. ಬರೋಬ್ಬರಿ 2 ಶತಕೋಟಿ ದಿರ್ಹ್ಹಂ ಮೊತ್ತದ ಈ ಯೋಜನೆಯ ಮೂರು ಹಂತದ ಕಾಮಗಾರಿಗಳು ನಿಗದಿತವಾಗಿ ಸಾಗುತ್ತಿವೆಯೆಂದು ಮೂಲಗಳು ತಿಳಿಸಿವೆ. ಮೂರನೆ ಹಂತದ ಕಾಮಗಾರಿಯ ಭಾಗವಾಗಿ ಸಫಾ ಪಾರ್ಕ್ ನೊಳಗೆ ಕಾಲುವೆಗಾಗಿ ಅಗೆತ ನಡೆಸಲಾಗಿದ್ದು, ಅದರ ಎರಡೂ ಕಡೆಗಳಲ್ಲಿ ಒಡ್ಡುಗಳನ್ನು ನಿರ್ಮಿಸಲಾಗಿದೆ. ಒಮ್ಮೆ ಮೂರೂ ಫ್ಲೈಓವರ್‌ಗಳು ಸಿದ್ಧಗೊಂಡಲ್ಲಿ ಎಲ್ಲಾ ಕಾಲುವೆಗಳ ಅಗೆತವನ್ನು ಪೂರ್ತಿಗೊಳಿಸಲಾಗುವುದು. ಬ್ಯುಸಿನೆಸ್ ಬೇ ಕಾಲುವೆಯನ್ನು ಅರೇಬಿಯನ್ ಕೊಲ್ಲಿ ಜೊತೆ ಸಂಪರ್ಕಿಸಲಾಗುವುದು. ಇದರಿಂದಾಗಿ ಜುಮೈರಾ, ಬರ್‌ದುಬೈ, ಝಬೀಲ್, ಅಲ್ ಕರಾಮ, ಔಡ್ ಮೆಥಾ ಹಾಗೂ ಸಾತ್ವಾ ಸೇರಿದಂತೆ ದುಬೈನ ಬಹುತೇಕ ಪ್ರದೇಶಗಳು ದ್ವೀಪದಂತಾಗಲಿದೆ.
ಯೋಜನೆಯ ಅಂತಿಮ ಹಂತವು, ಕಾಲುವೆಯ ಇಕ್ಕೆಲಗಳನ್ನು ಸಂಪರ್ಕಿಸುವ ಪಾದಚಾರಿ ಸೇತುವೆಗಳ ನಿರ್ಮಾಣವನ್ನೂ ಒಳಗೊಂಡಿದೆ. ನಾಲ್ಕು ನೌಕಾ ನಿಲ್ದಾಣಗಳು ಹಾಗೂ ಜುಮೈರಾ ಪಾರ್ಕ್‌ನುದ್ದಕ್ಕೂ ಕೃತಕ ಪರ್ಯಾಯದ್ವೀಪವನ್ನು ನಿರ್ಮಿಸುವ ಕಾಮಗಾರಿಗಳನ್ನು ಸಹ ಇದು ಒಳಗೊಂಡಿದೆ.
ಯುಎಇನ ಉಪಾಧ್ಯಕ್ಷ ಹಾಗೂ ಪ್ರಧಾನಿ ಮತ್ತು ದುಬೈನ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ 2013ರಲ್ಲಿ ಆರಂಭಿಸಿರುವ ಈ ಪ್ರತಿಷ್ಠಿತ ಅಭಿವೃದ್ಧಿ ಕಾಮಗಾರಿಯು 2016ರ ಅಂತ್ಯದೊಳಗೆ ಸಿದ್ಧವಾಗುವ ನಿರೀಕ್ಷೆಯಿದೆ.
ರಸ್ತೆ ಹಾಗೂ ಸಾರಿಗೆ ಪ್ರಾಧಿಕಾರ (ಆರ್‌ಟಿಎ)ವು ಇತ್ತೀಚೆಗೆ 12 ಮೆರೈನ್ ನಿಲ್ದಾಣಗಳನ್ನು ನಿರ್ಮಿಸುವ ನಿರ್ಧಾರವನ್ನು ಘೋಷಿಸಿದ್ದು, ಅವುಗಳಲ್ಲಿ ಐದು ದುಬೈ ಕಾಲುವೆಯನ್ನು ಸಂಪರ್ಕಿಸಲಿದೆ. ಉಳಿದ ನಿಲ್ದಾಣಗಳು 2018ರೊಳಗೆ ಬ್ಯುಸಿನೆಸ್ ಬೇ ಕಾಲುವೆಯನ್ನು ಸಂಧಿಸಲಿವೆ. ಈ ಇಡೀ ಯೋಜನೆ ಪೂರ್ಣಗೊಂಡ ಬಳಿಕ ದುಬೈ ಕ್ರೀಕ್‌ನೊಂದಿಗಿನ ಕಾಲುವೆಗಳುದ್ದಕ್ಕೂ 18 ಮೆರೈನ್ ನಿಲ್ದಾಣಗಳು ನಿರ್ಮಾಣವಾಗಲಿದ್ದು, ನೌಕಾ ಸಾರಿಗೆಗೆ ಮಹತ್ವದ ಉತ್ತೇಜನ ದೊರೆಯಲಿದೆ.







