ಮೋದಿ ಪಾಕಿಗೆ ತಿರುಗೇಟು ನೀಡಲಿ: ರಾಮದೇವ್
ಮುಂಬೈ,ಜ.9: ಭಾರತವು ಪಾಕಿಸ್ತಾನದ ಜೊತೆ ಮಾತುಕತೆಯನ್ನು ನಡೆಸಬೇಕು, ಆದರೆ ತನ್ನ ನೆಲದ ಮೇಲಿನ ಭಯೋತ್ಪಾದಕ ದಾಳಿಗಳಿಗೆ ತಕ್ಕ ಉತ್ತರ ನೀಡಬೇಕು ಎಂದು ಯೋಗಗುರು ರಾಮದೇವ್ ಅವರು ಶನಿವಾರ ಇಲ್ಲಿ ಹೇಳಿದರು.
ಮೋದಿಯವರು ಪಾಕಿಸ್ತಾನಕ್ಕೆ ಏಟಗೆ ತಿರುಗೇಟು ನೀಡಬೇಕು. ಅದು ನಮ್ಮ ಇಬ್ಬರನ್ನು ಕೊಂದರೆ ನಾವು ಅದರ ಹತ್ತು ಜನರನ್ನು ಕೊಲ್ಲಬೇಕು ಮತ್ತು ಇದೇ ವೇಳೆ ಶಾಂತಿ ಮಾತುಕತೆಗಳು ಮುಂದುವರಿಯಬೇಕು. ನಾವು ಶಾಂತಿಮಾರ್ಗವನ್ನು ಅನುಸರಿಸುವ ಅಗತ್ಯವಿದೆ ಮತ್ತು ಉದಾರ ಹೃದಯ ಹಾಗೂ ಅಷ್ಟೇ ಶೌರ್ಯವನ್ನು ಪ್ರದರ್ಶಿಸಬೇಕಿದೆ ಎಂದು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ರಾಮದೇವ್ ಹೇಳಿದರು.
ಭಾರತವು ದುರ್ಬಲವಲ್ಲ ಮತ್ತು ನಾವು ಯಾರಿಗೂ ಹೆದರುವುದೂ ಇಲ್ಲ. ಆದರೆ ಇತ್ತೀಚಿನ ಕೆಲವು ಘಟನೆಗಳಿಂದಾಗಿ ದೇಶದ ನೈತಿಕ ಸ್ಥೈರ್ಯಕ್ಕೆ ಹಾನಿಯುಂಟಾಗಿದೆ ಪಾಕಿಸ್ತಾನದ ವಿರುದ್ಧ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದರು.
ರಾಮ ಮಂದಿರ ವಿವಾದದ ಕುರಿತು ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮ ಜನಿಸಿದ್ದನೇ ಹೊರತು ಪ್ರವಾದಿ ಮುಹಮ್ಮದ್‌ರಲ್ಲ ಎನ್ನುವುದು ಇಡೀ ದೇಶಕ್ಕೇ ಗೊತ್ತಿದೆ. ಶ್ರೀರಾಮ ದೇಶದ ಹೆಮ್ಮೆಯಾಗಿದ್ದು, ಮಂದಿರ ನಿರ್ಮಾಣ ವಿಷಯವನ್ನು ರಾಜಕೀಯಗೊಳಿಸಬಾರದು ಎಂದರು.
ದೇಶದಲ್ಲಿ ಕೋಮು ಅಸಹಿಷ್ಣುತೆಯಿಲ್ಲ ಎಂದ ಅವರು, ಆದರೆ ಚಿಂತನೆಗಳು ಮತ್ತು ವಿಚಾರಗಳತ್ತ ಅಸಹಿಷ್ಣುತೆಯಿದೆ ಎಂದರು. ಈ ಅಸಹಿಷ್ಣುತೆ ಕೊನೆಗೊಂಡರೆ ದೇಶದಲ್ಲಿ ಸಂಪೂರ್ಣ ಶಾಂತಿ ನೆಲೆಸುತ್ತದೆ. ಸಂವಿಧಾನವು ನಮಗೆ ಕೆಲವು ಮೂಲಭೂತ ಹಕ್ಕುಗಳನ್ನುನೀಡಿದ್ದು, ಅವುಗಳ ಮೂಲಕ ನಾವು ನಮ್ಮ ಧ್ವನಿಯನ್ನು ಎತ್ತಬಹುದಾಗಿದೆ ಎಂದರು.





