ರಾಮಮಂದಿರಕ್ಕೆ ರಾಜೀವ್ ಗಾಂಧಿ ಬೆಂಬಲವಿತ್ತು : ಸುಬ್ರಮಣಿಯನ್ ಸ್ವಾಮಿ
ಹೊಸದಿಲ್ಲಿ,ಜ.9: ರಾಮಮಂದಿರಕ್ಕೆ ಮಾಜಿ ಪ್ರಧಾನಿ ರಾಜೀವ್‌ಗಾಂಧಿಯ ಬೆಂಬಲವಿತ್ತು ಎಂಬ ಹೊಸ ವರಸೆಯನ್ನು ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ತೆಗೆದಿದ್ದಾರೆ. ದಿಲ್ಲಿ ವಿಶ್ವವಿದ್ಯಾನಿಲಯದ ಹೊರಗೆ ಪ್ರತಿಭಟನೆಗಳ ನಡುವೆಯೇ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕುರಿತು ಎರಡು ದಿನಗಳ ವಿಚಾರ ಸಂಕಿರಣಕ್ಕೆ ಶನಿವಾರ ಚಾಲನೆ ನೀಡಿದರು.
ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡುವುದಾಗಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ತನಗೆ ಭರವಸೆ ನೀಡಿದ್ದರು ಎಂದು ಹೇಳಿಕೊಂಡ ಅವರು, ಮಂದಿರ ನಿರ್ಮಾಣ ಹೋರಾಟವನ್ನು ಬೆಂಬಲಿಸುವಂತೆ ಕಾಂಗ್ರೆಸ್ ಪಕ್ಷವನ್ನು ಕೋರಿಕೊಂಡರು.
ರಾಮ ಮಂದಿರವು ನಿರ್ಮಾಣಗೊಳ್ಳುತ್ತದೆ ಮತ್ತು ಅವಕಾಶ ದೊರೆತಾಗ ನೆರವನ್ನೂ ನೀಡುವುದಾಗಿ ರಾಜೀವ್ ತನಗೆ ವೈಯಕ್ತಿಕವಾಗಿ ತಿಳಿಸಿದ್ದರು. ಪಕ್ಷದ ವಿರೋಧವಿದ್ದರೂ ಜನತೆಯಲ್ಲಿ ಹೊಸ ರೋಮಾಂಚನವನ್ನುಂಟು ಮಾಡಿದ್ದ ‘ರಾಮಾಯಣ’ ಟಿವಿ ಧಾರಾವಾಹಿಯನ್ನು ಆರಂಭಿಸಿದ್ದು ಅವರ ಮೊದಲ ನೆರವು ಆಗಿತ್ತು. ಮಂದಿರದ ಶಿಲಾನ್ಯಾಸಕ್ಕೂ ಅನುಮತಿ ನೀಡುವುದಾಗಿ ಅವರು ಹೇಳಿದ್ದರು ಎಂದರು.
ದೇಶದಲ್ಲಿ ರಾಮರಾಜ್ಯ ನೆಲೆಸಬೇಕೆಂದು ರಾಜೀವ್ ತನ್ನ 1989ರ ಚುನಾವಣಾ ಪ್ರಚಾರ ಅಭಿಯಾನದಲ್ಲಿ ಹೇಳಿದ್ದರು. ಮಂದಿರ ನಿರ್ಮಾಣ ಬೇಡಿಕೆ ನಮ್ಮದು ಮಾತ್ರವಲ್ಲ, ಅದು ದೇಶದ ಬೇಡಿಕೆಯಾಗಿರುವುದರಿಂದ ಕಾಂಗ್ರೆಸ್ ಪಕ್ಷವು ಸಹ ಮುಂದೆ ಬರುತ್ತದೆ ಮತ್ತು ತನ್ನ ಬೆಂಬಲವನ್ನು ನೀಡುತ್ತದೆ ಎನ್ನುವುದು ನನ್ನ ಆಶಯವಾಗಿದೆ ಎಂದು ಅವರು ಹೇಳಿದರು.
ರಾಮಮಂದಿರವನ್ನು ಬಲಪ್ರಯೋಗದಿಂದ ಮತ್ತು ಕಾನೂನಿಗೆ ವಿರುದ್ಧವಾಗಿ ಮಾಡುವುದಿಲ್ಲ. ನಾವು ನ್ಯಾಯಾಲಯದಲ್ಲಿ ಜಯ ಗಳಿಸುತ್ತೇವೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ ಎಂದ ಅವರು, ನಮ್ಮ ದೇಶದಲ್ಲಿ 40,000ಕ್ಕೂ ಅಧಿಕ ದೇವಸ್ಥಾನಗಳನ್ನು ಧ್ವಂಸಗೊಳಿಸಲಾಗಿದೆ. ಅವೆಲ್ಲವೂ ಪುನರ್ ನಿರ್ಮಾಣಗೊಳ್ಳಬೇಕೆಂದು ನಾವೆಂದೂ ಹೇಳುವುದಿಲ್ಲ. ಆದರೆ ರಾಮ ಜನ್ಮಭೂಮಿ ಮಂದಿರ,ಮಥುರಾದ ಕೃಷ್ಣ ಮತ್ತು ಕಾಶಿ ವಿಶ್ವನಾಥ ದೇವಸ್ಥಾನಗಳ ಬಗ್ಗೆ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ರಾಮ ಮಂದಿರ ನಿರ್ಮಾಣಗೊಂಡರೆ ಇತರ ದೇವಸ್ಥಾನಗಳ ನಿರ್ಮಾಣಕ್ಕೆ ದಾರಿ ಸುಗಮಗೊಳ್ಳುತ್ತದೆ. ಚರ್ಚೆಗಳನ್ನು ಮಾಡಬಹುದು,ಆದರೆ ರಾಜಿಯನ್ನಲ್ಲ ಎಂದು ಅವರು ಹೇಳಿದರು.





