ಚೋಟಾ ರಾಜನ್‌ಗೂ ಸರಕಾರಕ್ಕೂ ವಿಶೇಷ ಸಂಬಂಧ: ದಿಲ್ಲಿಯ ಮಾಜಿ ಪೊಲೀಸ್ ಆಯುಕ್ತ
ಹೊಸದಿಲ್ಲಿ,ಜ.9: ಭಾರತ ಸರಕಾರವು ಭೂಗತ ಲೋಕದ ಪಾತಕಿ ಚೋಟಾ ರಾಜನ್ ಜೊತೆ ವಿಶೇಷ ಸಂಬಂಧವನ್ನು ಹೊಂದಿದೆ ಎಂದು ಮಾಜಿ ದಿಲ್ಲಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ಹೇಳಿದ್ದಾರೆ. ರಾಜನ್‌ನನ್ನು ಕಳೆದ ವರ್ಷದ ನವೆಂಬರ್‌ನಲ್ಲಿ ಬಾಲಿಯಿಂದ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು.
ಶುಕ್ರವಾರ ರಾತ್ರಿ ದಿಲ್ಲಿ ಸಾಹಿತ್ಯೋತ್ಸವದಲ್ಲಿ ಪತ್ರಕರ್ತ ಅವಿರೂಕ್ ಸೇನ್ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಕುಮಾರ್ ಈ ವಿಷಯವನ್ನು ಬಹಿರಂಗಗೊಳಿಸಿದರು.
ಈ ಕುರಿತು ಸೇನ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರ್, ಸಂಕ್ಷಿಪ್ತವಾಗಿ ಉತ್ತರಿಸಬೇಕೆಂದರೆ...ಹೌದು,ಅಂತಹ ಸಂಬಂಧ ಇದೆ ಎಂದು ಹೇಳಿದರು.
1993ರ ಮುಂಬೈ ಸರಣಿ ಬಾಂಬ್ ಸ್ಫೋಟಗಳ ಬಳಿಕ ತಾನು ರಾಜನ್ ಜೊತೆ ಮೂರು ಬಾರಿ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದೆ ಎಂದು ಕುಮಾರ್ ಕಳೆದ ವರ್ಷ ಬಿಡುಗಡೆಗೊಂಡಿದ್ದ ತನ್ನ ಪುಸ್ತಕದಲ್ಲಿ ಬರೆದಿದ್ದರು.
1990ರ ದಶಕದಲ್ಲಿ ಒಂದು ಹಂತದಲ್ಲಿ ದಾವೂದ್ ಇಬ್ರಾಹಿಂ ಶರಣಾಗಲು ಬಯಸಿದ್ದ ಎನ್ನುವುದನ್ನು ಬಹಿರಂಗಗೊಳಿಸಿದ್ದಕ್ಕಾಗಿ ಈ ಪುಸ್ತಕ ಸುದ್ದಿಯಲ್ಲಿತ್ತು. ಸೇನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಮಾರ್,ದಾವೂದ್‌ನನ್ನು ಬಂಧಿಸಲು ರಾಜನ್‌ನನ್ನೇ ಸಂಪೂರ್ಣವಾಗಿ ನೆಚ್ಚಿಕೊಳ್ಳಬಾರದು ಎಂದು ಹೇಳಿದರು.
ದಾವೂದ್‌ನ ಮಾಜಿ ಬಂಟನಾಗಿರುವ ರಾಜನ್ ಪ್ರಸ್ತುತ ದಿಲ್ಲಿಯ ತಿಹಾರ್ ಜೈಲಿನಲ್ಲಿದ್ದಾನೆ.





