ಬಿಹಾರ: ಐವರು ಮಾವೋವಾದಿಗಳ ಹತ್ಯೆ
ಪಾಟ್ನಾ,ಜ.9: ಬಿಹಾರದ ಔರಂಗಾಬಾದ್ ಜಿಲ್ಲೆಯ ಅರಣ್ಯದಲ್ಲಿ ಮಾವೋವಾದಿಗಳ ಹಾಗೂ ಸಿಆರ್‌ಪಿಎಫ್‌ನವಿಶೇಷ ಕಮಾಂಡೊ ಘಟಕದ ನಡುವೆ ನಡೆದ ಗುಂಡಿನ ಕಾಳಗವೊಂದರಲ್ಲಿ ಐವರು ಮಾವೋವಾದಿಗಳು ಹತರಾಗಿದ್ದಾರೆ.
ನಕ್ಸಲ್ ಪೀಡಿತ ಜಿಲ್ಲೆಯ ದಿಭಾರಾ ಪ್ರದೇಶದಲ್ಲಿ ನಿನ್ನೆ ತಡ ಸಂಜೆ ಗುಂಡಿನ ಚಕಮಕಿ ಆರಂಭವಾಗಿತ್ತು. ಆ ಬಳಿಕ ಸ್ಥಳದಲ್ಲಿ ಐವರು ಮಾವೋವಾದಿಗಳ ಶವಗಳು ಒಂದು ಎಕೆ.ರೈಫಲ್, ಒಂದು ಕಾರ್ಬೈನ್, ಒಂದು ನಾಡಬಂದೂಕು ಹಾಗೂ ಇತರ ಮದ್ದುಗುಂಡುಗಳು ಪತ್ತೆಯಾದವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಕತ್ತಲು ಕವಿಯುತ್ತಿದ್ದಂತೆಯೇ, ಪಡೆಗಳು ಪ್ರದೇಶವನ್ನು ಸ್ವಚ್ಛಗೊಳಿಸುವ ಅವಕಾಶ ಪಡೆದಿದ್ದು, ಎನ್‌ಕೌಂಟರ್ ಬಗ್ಗೆ ಹೆಚ್ಚಿನ ವಿವರ ನೀಡಲಿದ್ದಾರೆ. ಪ್ರದೇಶದಲ್ಲಿ ಸಶಸ್ತ್ರ ಮಾವೋವಾದಿಗಳ ಚಲನವಲನದ ಕುರಿತು ಕೆಲವು ಮಾಹಿತಿಗಳು ಬಂದ ಬಳಿಕ ಕೋಬ್ರಾ ತಂಡವು ಕಾರ್ಯಾಚರಣೆಗಿಳಿಯಿತೆಂದು ಸಿಆರ್‌ಪಿಎಫ್ ಅಧಿಕಾರಿಗಳು ಹೇಳಿದ್ದಾರೆ.
ಸಿಆರ್‌ಪಿಎಫ್ ಅರಣ್ಯಗಳಲ್ಲಿ ಕಾರ್ಯಾಚರಣೆ ನಡೆಸಲೆಂದೇ ವಿಶೇಷವಾಗಿ ರಚಿಸಿರುವ ಕೋಬ್ರಾ ತಂಡ ಈ ಕಾರ್ಯಾಚರಣೆ ನಡೆಸಿದೆ.
ಕೋಬ್ರಾದ 205ನೆ ಬೆಟಾಲಿಯನ್‌ನ ಕಮಾಂಡೊ ಒಬ್ಬ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದಾನೆ. ಪಡೆಗಳು ಇನ್ನೂ ಸ್ಥಳವನ್ನು ಜಾಲಾಡುತ್ತಿವೆ. ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆಗಾಗಿಯೇ ಕೋಬ್ರಾ ಹಾಗೂ ಇತರ ಸಾಮಾನ್ಯ ಸಿಆರ್‌ಪಿಎಫ್ ಘಟಕವನ್ನು ಬಿಹಾರದ ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ.





