ಸಮ-ಬೆಸ ನಿಯಮ ಜ.15ಕ್ಕೆ ಅಂತ್ಯ: ದಿಲ್ಲಿ ಸರಕಾರ
ಹೊಸದಿಲ್ಲಿ, ಜ.9: ದಿಲ್ಲಿಯ ಎಎಪಿ ಸರಕಾರದ ಸಮ-ಬೆಸ ಸಂಖ್ಯೆಯ ವಾಹನ ಯೋಜನೆಯ ಭವಿಷ್ಯವನ್ನು ದಿಲ್ಲಿ ಹೈಕೋರ್ಟ್ ಸೋಮವಾರ ನಿರ್ಧರಿಸುವ ನಿರೀಕ್ಷೆಯಿದೆ. ಯೋಜನೆಯನ್ನು ಕೊನೆಗೊಳಿಸಬೇಕೇ ಅಥವಾ ಜ.15ರವರೆಗೆ ಮುಂದುವರಿಸಬೇಕೇ ಎಂಬುದನ್ನು ಅದು ಅಂದು ನಿರ್ಧರಿಸಲಿದೆ.
ಸುಪ್ರೀಂಕೋರ್ಟ್ ನೇಮಿತ ವಾತಾವರಣ ಮಾಲಿನ್ಯ ನಿಯಂತ್ರಣ ಮಂಡಳಿಯ (ಇಪಿಸಿಎ) ವರದಿಯೊಂದನ್ನು ದಿಲ್ಲಿ ಸರಕಾರವು ನ್ಯಾಯಾಲಯಕ್ಕೆ ಶುಕ್ರವಾರ ಸಲ್ಲಿಸಿದೆ. ಅದು, ಈ ಯೋಜನೆಯನ್ನು ಜ.15ರ ಬಳಿಕವೂ ವಿಸ್ತರಿಸಬಹುದೆಂದು ಶಿಫಾರಸು ಮಾಡಿದೆ. ಆದರೆ, ದಿಲ್ಲಿ ಸರಕಾರ ಅದನ್ನು ಅನುಸರಿಸುವ ಸಾಧ್ಯತೆಯಿಲ್ಲ.
ನ್ಯಾಯಾಲಯದಲ್ಲಿದ್ದ ದಿಲ್ಲಿಯ ಸಾರಿಗೆ ಸಚಿವ ಗೋಪಾಲ ರಾಯ್ ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತ, ಹಾಲಿ ಯೋಜನೆಯ ಅಂಕಿ-ಅಂಶವನ್ನು ವಿಶ್ಲೇಷಿಸಿದ ಬಳಿಕವೇ ಸರಕಾರವು ಎರಡನೆ ಹಂತದ ಬಗ್ಗೆ ಯೋಚಿಸಲಿದೆ. ಶೀಘ್ರವೇ ಎರಡನೆ ಹಂತವನ್ನು ಕೈಗೊಳ್ಳುವುದು ಪ್ರಾಯೋಗಿಕವಾಗಲಾರದು. ಜ.26 ಹತ್ತಿರ ಬರುತ್ತಿದೆ. ಅದರನಂತರ ಶಾಲಾ ಪರೀಕ್ಷೆಗಳಿವೆ. ಪುನಃ ಅಭಿಯಾನ ಜಾರಿಗೊಳಿಸುವ ಮೊದಲು ಸಾಕಷ್ಟು ಮೂಲ ಸೌಕರ್ಯ ಕಲ್ಪಿಸುವುದು ಅಗತ್ಯ ಎಂದರು.





