ಜೈಲಿಗೆ ಹೋಗಲು ಸಿದ್ಧರಾಗಿ: ಕೇಜ್ರಿವಾಲ್‌ಗೆ ಬಿಜೆಪಿ ಎಚ್ಚರಿಕೆ
ಹೊಸದಿಲ್ಲಿ, ಜ. 9: ದಿಲ್ಲಿ ಕ್ರಿಕೆಟ್ ಸಂಸ್ಥೆ ಡಿಡಿಸಿಎಯಲ್ಲಿ ನಡೆಯಿತೆನ್ನಲಾದ ಅವ್ಯವಹಾರಗಳ ಕುರಿತ ತನಿಖೆಯ ವಿಷಯದಲ್ಲಿ ಕೇಂದ್ರ ಸರಕಾರದ ವಿರುದ್ಧ ಹೊಸದಾಗಿ ವಾಗ್ದಾಳಿ ನಡೆಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮಾನನಷ್ಟ ಮೊಕದ್ದಮೆಯಲ್ಲಿ ಜೈಲಿಗೆ ಹೋಗಲು ಸಿದ್ಧವಾಗಿರಬೇಕೆಂದು ಬಿಜೆಪಿ ಹೇಳಿದೆ.
ದಿಲ್ಲಿ ಮುಖ್ಯಮಂತ್ರಿ ಒಂದರ ನಂತರ ಒಂದರಂತೆ ಅಸಾಂವಿಧಾನಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಪಕ್ಷ, ಕೇಜ್ರಿವಾಲ್‌ರ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದೆ. ತನ್ನ ವೈಫಲ್ಯಗಳನ್ನು ಮರೆಮಾಚಲು ಮುಖ್ಯಮಂತ್ರಿ ಬಿಜೆಪಿ ನಾಯಕರ ವಿರುದ್ಧ ರಾಜಕೀಯ ಪ್ರೇರಿತ ಆರೋಪಗಳನ್ನು ಹೊರಿಸುತ್ತಿದ್ದಾರೆ ಎಂದಿದೆ.
‘‘ಕೇಜ್ರಿವಾಲ್ ಮತ್ತು ಅವರ ಸಂಗಡಿಗರು ಜೈಲಿಗೆ ಹೋಗಲು ತಯಾರಿರಬೇಕು. ತನ್ನ ವೈಫಲ್ಯಗಳು ಮತ್ತು ಭ್ರಷ್ಟಾಚಾರವನ್ನು ಮರೆಮಾಚಲು ಅವರ ಸರಕಾರ ಹಲವಾರು ಅಸಾಂವಿಧಾನಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ’’ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ ಹೇಳಿದರು.
ಅರುಣ್ ಜೇಟ್ಲಿ ಡಿಡಿಸಿಎಯ ಮುಖ್ಯಸ್ಥರಾಗಿದ್ದ 13 ವರ್ಷಗಳ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಅವ್ಯವಹಾರಗಳು ನಡೆದಿವೆ ಎಂಬುದಾಗಿ ಕೇಜ್ರಿವಾಲ್ ಆರೋಪಿಸಿದ್ದರು. ಇದನ್ನು ಪ್ರಶ್ನಿಸಿ ಜೇಟ್ಲಿ ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.





